ಹೊಸಪೇಟೆಯಲ್ಲಿ ಭೀಕರ ಅಪಘಾತ: ೭ ಜನ ಸ್ಥಳದಲ್ಲೇ ಸಾವು

WhatsApp Image 2023-10-09 at 6.22.13 PM
Published on

ಹೊಸಪೇಟೆ: ಸಮೀಪದ ಗುಂಡಾ ಫಾರೆಸ್ಟ್ ಬಳಿ ಸೋಮವಾರ ಸಂಜೆ ಲಾರಿ ಮತ್ತು ಕ್ರೂಸರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ೭ ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹೊಸಪೇಟೆ ಉಕ್ಕಡಕೇರಿ ನಿವಾಸಿಗಳಾದ ಕೇರಿಯ ಪ್ರಮುಖರಲ್ಲಿ ಒಬ್ಬರಾದ ಗೋಣಿಬಸಪ್ಪ(೬೮) ಹಾಗೂ ಅವರ ಕುಟುಂಬಸ್ಥರಾದ ಉಮಾ(೪೫), ಕೆಂಚವ್ವ(೮೦), ಭಾಗ್ಯ(೩೨), ಅನಿಲ್(೩೨), ಯುವರಾಜ(೪), ಭೀಮಲಿಂಗಪ್ಪ(೫) ಎಂದು ಗುರುತಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಲು ಮುಟ್ಟಿದೆ.

ಘಟನೆ ವಿವರ:
ಹೊಸಪೇಟೆಯಿಂದ ಮರಿಯಮ್ಮನಹಳ್ಳಿಯತ್ತ ಸಾಗುತ್ತಿದ್ದ ಅದಿರು ತುಂಬಿದ ಲಾರಿಯ ಎಕ್ಸಲ್ ತುಂಡಾಗಿದ್ದು, ಎದುರು ಮುಖವಾಗಿ ಬರುತ್ತಿದ್ದ ಕ್ರೂಸರ್‌ಗೆ ಡಿಕ್ಕಿಯಾಗಿದೆ. ಅದರ ಹಿಂಬದಿಯಲ್ಲಿ ಬರುತ್ತಿದ್ದ ಲಾರಿಯೂ ಕ್ರೂಸರ್‌ಗೆ ಗುದ್ದಿದ್ದರಿಂದ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕ್ರೂಸರ್‌ನಲ್ಲಿದ್ದ ಏಳೂ ಜನರಲ್ಲಿ ಐವರು ಕ್ರೂಸರ್‌ನಲ್ಲೇ ಪ್ರಾಣ ಬಿಟ್ಟಿದ್ದು, ಇನ್ನಿಬ್ಬರು ರಸ್ತೆಯಲ್ಲಿ ಬಿದ್ದು ರಕ್ತದ ಮಡುವಿನಲ್ಲಿ ಕೆಲಕಾಲ ಒದ್ದಾಡಿ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.
ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ನಡೆಸುವಂತಾಯಿತು.
ಮೃತರು ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಲಾರಿ ರೂಪದಲ್ಲಿ ಕಾಯುತ್ತಿದ್ದ ಜವರಾಯ ಅವರನ್ನು ಬಲಿ ಪಡೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net