ಭಯಾನಕ ಅಪಘಾತ-ಭೀಕರ ಸಾವು

BASAVANAGAR EXIDENT
ವಿಜಯಪುರದ ಬಸವನಗರ ಬಳಿ ನಡೆದ ಅಪಘಾತ ದೃಶ್ಯ ಕಾಣಲು ಮುಗಿಬಿದ್ದ ಜನ.
Published on

ವಿಜಯಪುರ: ಸಿನಿಮೀಯ ಮಾದರಿಯಲ್ಲಿ ನುಗ್ಗಿ ಬಂದ ಕಾರ್‌ವೊಂದು ಬೈಕ್ ಸವಾರನಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಲ್ಲದೇ, ಕಾರ್‌ನ ಬೋನಟ್‌ನಲ್ಲಿಯೇ ಸವಾರನನ್ನು ಸಿಕ್ಕಿಸಿಕೊಂಡು ಕಿಲೋ ಮೀಟರ್‌ವರೆಗೆ ಎಳೆದೊಯ್ದು ಜೀವ ಕಿತ್ತುಕೊಂಡ ಭಯಾನಕ ಘಟನೆ ನಡೆದಿದೆ.

ಇಲ್ಲಿನ ಬಸವನಗರ ಬಳಿ ಗುರುವಾರ ಸಂಜೆ ನಡೆದ ಘಟನೆಯಲ್ಲಿ ಬೈಕ್‌ಸವಾರನೋರ್ವ ಭೀಕರವಾಗಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿಯನ್ನು ಇಂಡಿ ತಾಲೂಕಿನ ಅಗರಖೇಡ ಗ್ರಾಮದ ರವಿ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಈತ ವಕೀಲನೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಬಸವನಗರದಲ್ಲಿ ಬೈಕ್ ಮೇಲೆ ಕುಳಿತಿದ್ದಾಗ ವೇಗವಾಗಿ ಬಂದ ಇನ್ನೋವಾ ಕಾರ್ ಬಲವಾಗಿ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಕಾರ್ ಮುಂಭಾಗದ ಬೋನಟ್‌ನಲ್ಲಿ ದೇಹ ಸಿಕ್ಕಿದರೂ ಕಾರ್ ನಿಲ್ಲಿಸದೇ ಬಿಎಲ್‌ಡಿಇ ಆಯುಷ್ ಆಸ್ಪತ್ರೆವರೆಗೆ ಎಳೆದುಕೊಂಡು ಹೋಗಿರುವ ಕಾರ್ ಚಾಲಕ ಆತ ಸಾವಿಗೀಡಾಗುತ್ತಿದ್ದಂತೆ ಶವ ಬಿಟ್ಟು ಕಾರ್‌ನೊಂದಿಗೆ ಪರಾರಿಯಾಗಿದ್ದಾನೆ.

ಬೈಕ್ ಸವಾರ್ ಕಾರ್ ಮುಂಭಾಗದಲ್ಲಿ ಸಿಲುಕಿದ್ದನ್ನು ಗಮನಿಸಿದ ಸಾರ್ವಜನಿಕರು ಹಾಗೂ ವಾಹನ ಸವಾರರು ಕಿರುಚಾಡಿ ಹೇಳಿದರೂ ಕಾರ್‌ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು ಗಮನಿಸಿದರೆ ಮತ್ತು ಕಾರ್‌ಗೆ ನಂಬರ್ ಪ್ಲೇಟ್ ಇಲ್ಲದೇ ಇರುವುದು ಹಾಗೂ ಟಿಂಟೆಡ್ ಗ್ಲಾಸ್ ಇರುವ ಕಾರ್ ಬಳಸಿರುವುದು ನೋಡಿದರೆ ಇದೊಂದು ಉದ್ದೇಶಪೂರಿತ ಕೃತ್ಯ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಹಾಗೂ ಜಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net