

ಮಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ವಾಹನ ಚಾಲಕರು ಅನವಶ್ಯಕವಾಗಿ ಹಾರ್ನ್ ಬಳಸುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಾಗೂ ಶಬ್ದಮಾಲಿನ್ಯ ತಡೆಗಟ್ಟುವ ಸಲುವಾಗಿ ಮಂಗಳೂರು ನಗರದ ಪ್ರಮುಖ ಆರು ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ (ನೋ ಹಾರ್ನ್ ಜೋನ್) ಎಂದು ಘೋಷಿಸಲಾಗಿದೆ.
ಘೋಷಿತ ಪ್ರದೇಶಗಳ ವಿವರ:
1. ಲೇಡಿಗೋಷನ್ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶ: ರಾವ್ ಆ್ಯಂಡ್ ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ. ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್ವರೆಗೆ: ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ವರೆಗೆ.
2. ಹಂಪನಕಟ್ಟೆ ಜಂಕ್ಷನ್: ಹಂಪನಕಟ್ಟೆ ಜಂಕ್ಷನ್ನಿಂದ ಮಿಲಾಗ್ರಿಸ್ ಚರ್ಚ್ವರೆಗಿನ ಪ್ರದೇಶ. ಮಿಲಾಗ್ರಿಸ್ ಚರ್ಚ್ ಬಳಿಯ ವೆನ್ಲಾಕ್ ಆಸ್ಪತ್ರೆಯ ಗೇಟ್ನಿಂದ ಮುತ್ತಪ್ಪ ಗುಡಿಯವರೆಗೆ. ಹಂಪನಕಟ್ಟೆ ಜಂಕ್ಷನ್ನಿಂದ ಮಿನಿ ವಿಧಾನಸೌಧ ಕಟ್ಟಡದವರೆಗೆ.
3. ಡಾ.ಅಂಬೇಡ್ಕರ್ ವೃತ್ತದ ಪ್ರದೇಶ: ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50 ಮೀ. ಪ್ರದೇಶ. ಅಂಬೇಡ್ಕರ್ ವೃತ್ತದಿಂದ ಬಂಟ್ಸ್ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ. ಬಾವುಟಗುಡ್ಡ (ಮಹಿಳಾ ಸಭಾ ಕಟ್ಟಡ) ದಿಂದ ಅಂಬೇಡ್ಕರ್ ವೃತ್ತದವರೆಗೆ.
4. ಅತ್ತಾವರ ಕೆಎಂಸಿ ಆಸ್ಪತ್ರೆಯ ಉತ್ತರ ಬದಿಯ ಕಾಂಪೌಂಡ್ ಸಮೀಪದಿಂದ ಬಿಷಪ್ ವಿಕ್ಟರ್( ಅತ್ತಾವರ ನ್ಯೂ ರೋಡ್) ತಿರುವಿನವರೆಗೆ.
5. ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ.
6. ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ.
ವಾಹನ ಚಾಲಕರು ಮೇಲ್ಕಂಡ ಸ್ಥಳಗಳಲ್ಲಿ ವಾಹನಗಳ ಹಾರ್ನ್ ಬಳಸುವುದನ್ನು ನಿಷೇಧಿಸಲಾಗಿದೆ. ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019ರ ಕಲಂ 194 (ಎ್)ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ, ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ 1000 ರೂ. ದಂಡ ಹಾಗೂ ಎರಡನೇ ಹಾಗೂ ತದನಂತರದ ಪ್ರತಿ ಉಲ್ಲಂಘನೆಗೆ 2000 ರೂ. ದಂಡ ವಿಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.