

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಮೆರಿಕದ ವರ್ಜೀನಿಯಾದ ರಿಚ್ಮಂಡ್ನ ಕನ್ವೆನ್ಷನ್ ಸೆಂಟರ್ನಲ್ಲಿ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.
ಕನ್ನಡ ನಾಡು, ನುಡಿ, ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ, ಕನ್ನಡ ಭಾಷೆಯ ಪ್ರಚಾರಕ್ಕೆ ಕೈಗೊಳ್ಳಬೇಕಾದ ಇಂದಿನ ತುರ್ತು ಅವಶ್ಯಕತೆಗಳ ಕುರಿತು ಹೊರಟ್ಟಿ ಅವರು ಮಾತನಾಡುವರು. 28ರಂದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ರಕ್ಷಣೆ ಕುರಿತು ವಿವಿಧ ಗೋಷ್ಠಿಗಳು, ಚಿಂತನ-ಮಂಥನ, ಸಂವಾದಗಳು ನಡೆಯಲಿದ್ದು, ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಕರ್ನಾಟಕದ ವಿವಿಧ ಬಗೆಯ ರುಚಿಕರ ತಿಂಡಿ-ತಿನಿಸುಗಳ ಮಳಿಗೆಗಳು, ಕಲೆ-ಸಾಹಿತ್ಯ, ವಿದ್ಯಾ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಂಗಮ, ವಿವಿಧ ಕ್ರೀಡಾಕೂಟಗಳು, ಆರೋಗ್ಯ ಮತ್ತು ಅಧ್ಯಾತ್ಮಿಕ ಸೇರಿ ಹಲವು ಕಾರ್ಯಕ್ರಮಗಳು ನಡೆಯಲಿವೆ. 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ಒಂದೇ ಸೂರಿನಡಿಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ.