ಪರಿಷತ್ ಗೆ ಸಾಧಕರನ್ನು ಪರಿಗಣಿಸಲು ಹೊರಟ್ಟಿ ಮನವಿ

IMG-20250530-WA0007-1.jpg
Published on

ಹುಬ್ಬಳ್ಳಿ: ಹಿರಿಯರ ಮನೆ, ಚಿಂತಕರ ಛಾವಡಿಯೆಂದೇ ಕರೆಯಲ್ಪಡುವ ಕರ್ನಾಟಕ ವಿಧಾನ ಪರಿಷತ್ತು ತನ್ನದೇ ಆದ ಘನತೆ- ಗಾಂಭೀರ್ಯ ಹೊಂದಿದೆ. ಹಾಗಾಗಿ ಇದಕ್ಕೆ ವಿವಿಧ ಕ್ಷೇತ್ರದ ಸಾಧಕರನ್ನು ನಾಮಕರಣ ಮಾಡುವ ಮೂಲಕ ಸಂಸ್ಕೃತಿಯನ್ನು ಮುಂದುವರಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಇತಿಹಾಸವನ್ನು ಅವಲೋಕಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ 11 ಸ್ಥಾನಗಳಿಗೆ ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುತ್ತಾರೆ. ಈವರೆಗೂ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಶಿಕ್ಷಣ, ಮಾಧ್ಯಮ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ನಾಮಕರಣ ಮಾಡಲಾಗುತ್ತಿದ್ದು, ಅಂತಹ ಮಹನೀಯರು ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿರುತ್ತಾರೆ.

ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ 4 ನಾಮನಿರ್ದೇಶನ ಸ್ಥಾನಗಳು ಖಾಲಿ ಇದ್ದು ಸೂಕ್ತ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ನಾಮನಿರ್ದೇಶನಗೊಳಿಸುವ ಗುರುತರವಾದ ಜವಾಬ್ದಾರಿ ತಮ್ಮದಾಗಿರುತ್ತದೆ. ಅದುದರಿಂದ ಸಂವಿಧಾನದ ಆಶೋತ್ತರದ ಅನ್ವಯ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಸದನದ ಕಾರ್ಯಕಲಾಪಗಳನ್ನು ಉನ್ನತ ಮಟ್ಟದಲ್ಲಿ ನಿರೀಕ್ಷಿಸಬಹುದಾಗಿರುತ್ತದೆ ಎಂಬುದು ನನ್ನ ಅಭಿಲಾಶೆ ಎಂದು ತಿಳಿಸಿದ್ದಾರೆ.

ಇಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸೋತವರು ಹಾಗೂ ದೊಡ್ಡ ದೊಡ್ಡ ನಾಯಕರ ಹಿಂದೆ ಇದ್ದವರು ನಾಮನಿರ್ದೇಶನ ಆಗಿ ಬರುತ್ತಿರುವವರನ್ನು ನಾವು ನೋಡುತ್ತಿದ್ದೇವೆ. ಇದು ಎಲ್ಲ ಕಾಲದಲ್ಲಿ ನಡೆದು ಬರುತ್ತಿರುವ ಸಂಗತಿ.

ಈ ಸಾರಿ ಇದಕ್ಕೆ ಆಸ್ಪದ ಕೊಡದೇ ಸಾಧಕರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿರುವ ಅವರು, ಈ ಮೊದಲು ನೇಮಕವಾಗಿದ್ದ ಮಹನೀಯರ ಪಟ್ಟಿಯನ್ನು ಸಿಎಂಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net