ಕನ್ನಡ ಓದಲು ಬಾರದ ವಿದ್ಯಾರ್ಥಿಗಳು,  ಸಭಾಪತಿ ಬಸವರಾಜ ಹೊರಟ್ಟಿ ಬೇಸರ

IMG-20250530-WA0007-1.jpg
Published on

ಹುಬ್ಬಳ್ಳಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ಎಂಬ ಸಂಗತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕನ್ನಡದ ಕನಿಷ್ಠ ಅಕ್ಷರ ಜ್ಞಾನವೂ ಇಲ್ಲ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬಹಳ ಬೇಸರ ಹಾಗೂ ನೋವು ಉಂಟಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಕಳಪೆ ಸಾಧನೆಗೆ ಕಾರಣವನ್ನು ಹುಡುಕುವ ಕುರಿತು ಅವಲೋಕನ ನಡೆಸಿದಾಗ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಕಲಿಯದಿದ್ದಾಗ ಹೊಣೆ ಯಾರು? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪ್ರಸ್ತುತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕನ್ನಡ ವರ್ಣಮಾಲೆಯ ಅಕ್ಷರಗಳು ಗೊತ್ತಿಲ್ಲ, ಆಂಗ್ಲ ಭಾಷೆಯ ಅಲ್ಫಾಬೆಟ್ ಗಳು ತಿಳಿದಿಲ್ಲ. ಗಣಿತ ವಿಷಯದ ಮೂಲಕ್ರಿಯೆಗಳಾದ ಸಂಕಲನ ವ್ಯವಕಲನ ಬರುವುದಿಲ್ಲವೆಂದರೆ ಶಿಕ್ಷಣ ವ್ಯವಸ್ಥೆ ಬಗ್ಗೆ ಬಹಳ ಕಳವಳವೆನಿಸುತ್ತದೆ.

ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾದರೆ, ಗುಣಮಟ್ಟದ ಶಿಕ್ಷಣ ದೊರಕಬೇಕಾದರೆ ವ್ಯವಸ್ಥೆಯ ಬುನಾದಿ ಪ್ರಾಥಮಿಕ ಶಿಕ್ಷಣವನ್ನು ಸದೃಢಗೊಳಿಸಬೇಕು.

ಆದರೆ, ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಇತರೆ ಅನ್ಯ ಕರ್ತವ್ಯಗಳಿಗೆ ಮುಖ್ಯವಾಗಿ ಶಿಕ್ಷಕರನ್ನೆ ನಿಯೋಜಿಸುತ್ತಿರುವುದರಿಂದ ಬೋಧಕ ಸಿಬ್ಬಂದಿಗೆ ಕಲಿಕಾ ಚಟುವಟಿಕೆ, ಪಠ್ಯ ಚಟುವಟಿಕೆಗಳನ್ನು ಮಾಡಲು ಸಮಯ ದೊರಕದಂತಾಗಿದೆ. ಈ ಕುರಿತು ಹಲವಾರು ಬಾರಿ ಪತ್ರ ಮುಖೇನ ತಮಗೆ ತಿಳಿಸಿದ್ದೇನೆ ಎಂದು ಹೊರಟ್ಟಿ ಅವರು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷಕರು ಜನಗಣತಿ, ಮಕ್ಕಳ ಗಣತಿ, ಜಾತಿ ಗಣತಿ, ಪ್ರವಾಹ ಪೀಡಿತ ಪ್ರದೇಶದ ಅವಲೋಕನ ಕಾರ್ಯ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಬಿಡುವಿಲ್ಲದ ಕಾರ್ಯ ಮಾಡುತ್ತಿದ್ದಾರೆ. ಈ ಎಲ್ಲ ಕಾರ್ಯಗಳ ಜತೆಗೆ ಪಠ್ಯಚಟುವಟಿಕೆಗೆ ಸಮಯ ದೊರೆಯುವುದು ಯಾವಾಗ? ಗುಣಾತ್ಮಕ ಕಲಿಕೆ ಮತ್ತು ಉತ್ತಮ ಫಲಿತಾಂಶವನ್ನು ನಿರೀಸುವುದು ಯಾವಾಗ? ಎಂಬ ಪ್ರಶ್ನೆಗಳು ಯಾವಾಗಲೂ ಕಾಡುತ್ತಿವೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಂತೆ ಇನ್ನೂ ಹಲವಾರು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುವಂತಹ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳಿಂದಲೂ ಶೇ. 10ರಷ್ಟು ಸಿಬ್ಬಂದಿಯನ್ನು ನಿಯೋಜಿಸುವುದರಿಂದ ಇಲಾಖೆಗಳ ಕಾರ್ಯಗಳು ಯಥಾವತ್ತಾಗಿ ಯಾವುದೇ ತೊಂದರೆ ಇಲ್ಲದೇ ನಡೆಯುತ್ತವೆ ಎಂದು ಹೊರಟ್ಟಿ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net