ಹುಬ್ಬಳ್ಳಿ: ದಿವಂಗತ ಮಾಜಿ ಮುಖ್ಯಮಂತ್ರಿಗಳಿಗೆ ಸಮಾನ ಗೌರವ ಸಲ್ಲಿಕೆಯಾಗಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಕನ್ನಡ ನಾಡು, ನುಡಿ, ಭಾಷೆ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮನ್ನು ಸೇರಿದಂತೆ ಈಗಾಗಲೇ 30 ಜನ ಮುಖ್ಯಮಂತ್ರಿಗಳು ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದು ಪ್ರಗತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಇವರಲ್ಲಿ ಅನೇಕ ಮಾಜಿ ಮುಖ್ಯಮಂತ್ರಿಗಳು ನಮ್ಮನ್ನು ಅಗಲಿದ್ದಾರೆ.
ಕೆಲವು ದಿವಂಗತ ಮುಖ್ಯಮಂತ್ರಿಗಳಿಗೆ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದು, ಅವರ ಜನ್ಮದಿನ ಹಾಗೂ ಪುಣ್ಯತಿಥಿಯ ದಿನಗಳಂದು ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಸಂಪ್ರದಾಯವಿದೆ.
ಆದರೆ, ಹಲವಾರು ಮಾಜಿ ಮುಖ್ಯಮಂತ್ರಿಗಳ ಪ್ರತಿಮೆ ಅಥವಾ ಪುತ್ಥಳಿಗಳು ವಿಧಾನಸೌಧದ ಅವರಣದಲ್ಲಿ ಇಲ್ಲದಿರುವ ಕಾರಣ ಅಂತಹ ಮಹನೀಯರ ಜನ್ಮದಿನ ಮತ್ತು ಪುಣ್ಯತಿಥಿಯ ದಿನಗಳಂದು ಅವರಿಗೆ ಯಾವುದೇ ರೀತಿಯ ಗೌರವ ಸಲ್ಲಿಸುವಂತಹ ಪ್ರಕ್ರಿಯೆಗಳಿರುವುದಿಲ್ಲ.
ಇದರಿಂದಾಗಿ ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳ ಮಂಜಪ್ಪ, ಎಸ್.ಆರ್. ಕಂಠಿ, ಬಿ.ಡಿ. ಜತ್ತಿ, ಆರ್. ಗುಂಡುರಾವ್, ವಿರೇಂದ್ರ ಪಾಟೀಲ್, ಬಂಗಾರಪ್ಪ, ರಾಮಕಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಧರ್ಮಸಿಂಗ್ ಇನ್ನು ಮುಂತಾದ ಗಣ್ಯರಿಗೆ ಇಂತಹ ಗೌರವಗಳು ಸಿಗುತ್ತಿರುವುದಿಲ್ಲ.
ಈ ಹಿನ್ನಲೆಯಲ್ಲಿ ದಿವಂಗತರಾದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಹಿನ್ನಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಅವರ ಪೂರ್ಣ ಪ್ರಮಾಣದ ಭಾವಚಿತ್ರವನ್ನು ಅವರುಗಳ ಅವಧಿಯನ್ನು ನಮೂದಿಸಿ, ಅವರಿಗೆ ಸರ್ಕಾರದ ವತಿಯಿಂದ ಸಮಾನ ಗೌರವ ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕೆನ್ನುವುದು ನನ್ನ ಮನದಾಳದ ಅಭಿಪ್ರಾಯವಾಗಿದೆ.
ಭಾರತ ದೇಶದ ಸಂಸತ್ ಭವನದಲ್ಲಿ ಇದುವರೆಗೂ ಈ ದೇಶವನ್ನು ಮುನ್ನಡೆಸಿದ ದಿವಂಗತ ಮಾಜಿ ಪ್ರಧಾನ ಮಂತ್ರಿಗಳ ಜನ್ಮದಿನ ಹಾಗೂ ಪುಣ್ಯತಿಥಿ ದಿನಗಳಂದು ಗಣ್ಯರು ಸೇರಿ ಅವರ ಭಾವ ಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಅವರ ಸೇವೆಯನ್ನು ಸ್ಮರಿಸುವ ಪರಿಪಾಠವಿದೆ.
ಅಲ್ಲದೆ ಎಲ್ಲ ಮಾಜಿ ಪ್ರಧಾನಿಗಳ ಜೀವನ, ಸಾಧನೆ ಹಾಗೂ ಸಮಾಜ ಸೇವೆಯನ್ನು ಪರಿಚಯಿಸುವ ಮ್ಯೂಸಿಯಂನ್ನು ಸಹ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದ ಬೆಳವಣಿಗೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಿಗೂ ಸಮಾನ ಗೌರವ ನೀಡುವ ಹಿನ್ನಲೆಯಲ್ಲಿ ದೆಹಲಿ ಮಾದರಿಯಲ್ಲಿಯೇ ಮ್ಯೂಸಿಯಂನ್ನು ಸಹ ಸ್ಥಾಪಿಸಬೇಕೆಂದು ಕೋರುತ್ತೇನೆ.
ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿ ಎರಡು ಬಾರಿ ಪತ್ರ ಬರೆದಿದ್ದೇನೆ. ಇದಕ್ಕೆ ಸಂಬಂಧಿಸಿದ ಕಡತವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ತಮ್ಮ ಕಚೇರಿಗೆ ಕಳುಹಿಸಿದ್ದು, ತಮ್ಮ ಅನುಮೋದನೆ ಬಾಕಿ ಇದೆ. ಹಾಗಾಗಿ ಈ ವಿಷಯ ಕುರಿತು ಮತ್ತೊಮ್ಮೆ ತಮಗೆ ಪತ್ರ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.