ಕಾನೂನು ವಿವಿಗೆ ಸರ್ ಸಿದ್ದಪ್ಪ ಕಂಬಳಿ ಹೆಸರಿಡಿ,  ಮುಖ್ಯಮಂತ್ರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

IMG_20250917_210134_631.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರಿಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, 20ನೇ ಶತಮಾನದ ಆರಂಭದಲ್ಲಿ ಭಾರತ ದೇಶಕ್ಕೆ ಒಂದು ಹೊಸರೂಪ ಕೊಟ್ಟ ಮಾನ್ಯರಲ್ಲಿ ಸರ್ ಸಿದ್ದಪ್ಪ ಕಂಬಳಿ ಅವರು ಪ್ರಮುಖರು. ಇವರು ಮೂಲತಃ ಹುಬ್ಬಳ್ಳಿಯವರಾಗಿದ್ದು, ಆಗಿನ ಬ್ರಿಟಿಷ್ ಆಳ್ವಿಕೆಯ ಮುಂಬೈ ಪ್ರಾಂತದ ಸರ್ಕಾರದಲ್ಲಿ ಒಟ್ಟು ಏಳು ಖಾತೆಗಳ ಮಂತ್ರಿಯಾಗಿದ್ದರು. ಅತ್ಯಂತ ಪ್ರಾಮಾಣಿಕ ಮತ್ತು ದ ಆಡಳಿತ ನೀಡಿ ಬ್ರಿಟಿಷ್ ಸರ್ಕಾರ ಕೊಡಮಾಡಿದ ಅತ್ಯುನ್ನತ ನಾಗರಿಕ ಪದವಿ ಸರ್ ಬಿರುದಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಂದಿನ ಮುಂಬೈ ಪ್ರಾಂತವು ಕರ್ನಾಟಕದ ಹರಿಹರ ನದಿ ಗಡಿಯಿಂದ ಪ್ರಾರಂಭವಾಗಿ ಮಹಾರಾಷ್ಟ್ರ, ಗುಜರಾತ, ರಾಜಸ್ಥಾನ, ಪಂಜಾಬ ಮತ್ತು ಈಗಿನ ಪಾಕಿಸ್ತಾನದವರೆಗೆ ಕಾರ್ಯ ಕ್ಷೇತ್ರ ಹೊಂದಿತ್ತು. ಇವೆಲ್ಲ ಪ್ರಾಂತ್ಯಕ್ಕೆ ಮಂತ್ರಿಯಾಗಿ ಸೇವೆ ಸಲ್ಲಿಸಿದವರು ಕಂಬಳಿ ಅವರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು ಹಾಗೂ ಲಿಂಗರಾಜ ಕಾಲೇಜು ಒಳಗೊಂಡಂತೆ ಅನೇಕ ಶಿಣ ಸಂಸ್ಥೆಗಳನ್ನು ಪ್ರಾರಂಭ ಮಾಡಿದ ರೂವಾರಿಗಳು.

ಕರ್ನಾಟಕ ಏಕೀಕರಣದ ಮೊದಲ ಅಧ್ಯಕ್ಷರಾಗಿ, ಕರ್ನಾಟಕದಲ್ಲಿ ಪ್ರಥಮವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಮಾವೇಶವನ್ನು 1920ರ ಜುಲೈನಲ್ಲಿ ಹುಬ್ಬಳ್ಳಿಯಲ್ಲಿ ಏರ್ಪಡಿಸಿದರು. ಸಮಾವೇಶದ ಅಧ್ಯಕ್ಷತೆಯನ್ನು ಕೊಲ್ಲಾಪುರದ ಶಾಹು ಮಹಾರಾಜರು, ಸದ್ಗುರು ಸಿದ್ದಾರೂಢ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಬ್ರಿಟಿಷ್ ವಸಾಹತುಶಾಯಿ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ಹೊರತಾಗಿಯೂ ಅಂತಹ ಪರಿಸ್ಥಿತಿಯಲ್ಲಿ ಕೆಳವರ್ಗದ ವ್ಯಕ್ತಿಗಳಿಗೆ ಹೆಚ್ಚಿನ ಶಿಕ್ಷಣ, ಉದ್ಯೋಗಾವಕಾಶ ನೀಡುವುದರ ಮೂಲಕ ಜಾತಿ ತಾರತಮ್ಯದ ವಿರುದ್ಧ ಕಾನೂನನ್ನು ರೂಪಿಸಿದ್ದಲ್ಲದೆ ಕಾನೂನನ್ನು ಸಕ್ರಿಯಗೊಳಿಸಿದ ಕೀರ್ತಿ ಕಂಬಳಿ ಅವರಿಗೆ ಸಲ್ಲುತ್ತದೆ. ಇಂತಹ ಮಹನೀಯರ ಹೆಸರನ್ನು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್ಎಲ್ ಯು) ನಾಮಕರಣ ಮಾಡಬೇಕೆನ್ನುವುದು ಕರ್ನಾಟಕದ ಜನರ ಅಭಿಲಾಷೆ ಎಂದು ಹೊರಟ್ಟಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net