ಕೊಡಗು ವಿವಿ ಉಳಿಸಿಕೊಳ್ಳಲು ಹೋರಾಟ

horata
????????????????????????????????????
Published on

ಮಡಿಕೇರಿ:

ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಭರವಸೆಯ ಬೆಳಕಾಗಿ ಆರಂಭವಾಗಿರುವ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎನ್ನುವ ವರದಿ ಕೊಡಗಿನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗು ವಿವಿಯನ್ನು ಉಳಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಈ ಸಂಬAಧ 'ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗ'ವೂ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮುಂದುವರಿಸಿದೆ.

ಕಳೆದ ಗುರುವಾರ (ಫೆ.13) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಕೊಡಗು ವಿವಿ ಸೇರಿದಂತೆ 9 ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂಬAಧ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳಲಿದೆ. ಆರಂಭವಾದ ಕೇವಲ 2 ವರ್ಷಗಳಲ್ಲೇ ಕೊಡಗು ವಿವಿ ಬಾಗಿಲು ಮುಚ್ಚಲು ಹೊರಟಿರುವ ಸರ್ಕಾರದ ಈ ನಿರ್ಧಾರ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

2011ರ ಜನಗಣತಿ ದಾಖಲೆಗಳ ಆಧಾರದ ಮೇಲೆ ಜಿಲ್ಲಾಡಳಿತದ ಮೂಲಗಳು ಕೊಡುವ ಮಾಹಿತಿ ಪ್ರಕಾರ ಕೊಡಗಿನ ಒಟ್ಟು ಸಾಕ್ಷರತಾ ಪ್ರಮಾಣ ಶೇ.82.61. ಇದರಲ್ಲಿ ಪುರುಷ ಸಾಕ್ಷರರು ಶೇ. 87.19 ಆದರೆ, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 78.14. ಆದರೆ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇ. 15 ಮಾತ್ರ. ಪಕ್ಕದ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.25 ರಿಂದ 30 ರಷ್ಟಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 5ಕ್ಕಿಂತಲೂ ಕಡಿಮೆ ಇರುವುದು ಮತ್ತು ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಸಾಕ್ಷರತಾ ಪ್ರಮಾಣಕ್ಕೆ ಹೋಲಿಸಿದರೆ ತೀರಾ ಕಡಿಮೆ ಇರುವುದು ಗಮನಾರ್ಹ ವಿಷಯವಾಗಿದ್ದು, ಕೊಡಗು ವಿವಿ ಉಳಿಸಲು ಹೋರಾಟ ನಡೆಸುತ್ತಿರುವವರು ಇದೇ ಸಂಗತಿಯನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಿದ್ದಾರೆ.

ಉಳಿದ ವಿವಿಗಳಿಗೆ ಹೋಲಿಸಿದರೆ ಕೊಡಗಿಗೆ ಹತ್ತಿರದಲ್ಲಿ ಒಂದು ಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಇದ್ದರೆ, ಮತ್ತೊಂದು ಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯ ಇದೆ. ಆದರೆ ಬಡತನ, ಕೊಡಗಿನಂಥ ಗುಡ್ಡಗಾಡು ಪ್ರದೇಶಗಳ ಮಕ್ಕಳು ದೂರದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ಆಸೆ ಹೆಣ್ಣುಮಕ್ಕಳು ಮತ್ತು ಅವರ ಪೋಷಕರಿಗೆ ಇದ್ದರೂ ದೂರದ ನಗರಗಳಿಗೆ ಕಳಿಸಲು ಪೋಷಕರ ಹಿಂದೇಟು ಮತ್ತಿತರ ಕಾರಣಗಳಿಂದ ದೂರದ ಊರುಗಳಿಗೆ ಕಳುಹಿಸಲು ಹಿಂಜರಿಯುವವರೇ ಹೆಚ್ಚು.

ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಘೋಷಣೆಯಂತೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತಂದು ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಕೊಡಗು, ಹಾಸನ, ಬಾಗಲಕೋಟೆ, ಕೊಪ್ಪಳ, ಬೀದರ್, ಚಾಮರಾಜನಗರ ಹಾಗೂ ಹಾವೇರಿ ಸೇರಿ ಒಟ್ಟು 7 ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು. ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಶಾಲನಗರ ತಾಲೂಕು ಚಿಕ್ಕ ಅಳುವಾರದ ಕ್ಯಾಂಪಸ್‌ನಲ್ಲಿ 2023-24ನೇ ಸಾಲಿನಿಂದ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಆರಂಭವಾಗುವ ಮೂಲಕ ಕೊಡಗು ವಿಶ್ವವಿದ್ಯಾಲಯದ ಚಟುವಟಿಕೆ ಅಧಿಕೃತವಾಗಿ ಶುರುವಾಗಿತ್ತು.

ನಂತರ ಚುನಾವಣೆ ನಡೆದು ಸರ್ಕಾರ ಬದಲಾದ ಮೇಲೆ ನೂತನ ವಿಶ್ವವಿದ್ಯಾಲಯಕ್ಕೆ ಯಾವುದೇ ಅನುದಾನ ಬಂದಿರಲಿಲ್ಲ. ಆದರೆ ದೂರದೃಷ್ಟಿತ್ವ ಹೊಂದಿರುವ ಕೊಡಗು ವಿವಿಯ ಉತ್ಸಾಹಿ ಕುಲಪತಿ ಮತ್ತು ಸಿಬ್ಬಂದಿ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಇತರ ನೂತನ ವಿವಿಗಳಿಗೆ ಮಾದರಿ ಆಗುವ ರೀತಿಯಲ್ಲಿ ಕೊಡಗು ವಿವಿಗೆ ಭದ್ರ ಭುನಾದಿ ಹಾಕುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹಂತದಲ್ಲೇ ವಿವಿ ಮುಚ್ಚುವ ಸರ್ಕಾರದ ನಿರ್ಧಾರ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಪಡೆಯುವ ಕನಸ್ಸು ಕಾಣುತ್ತಿದ್ದವರನ್ನು ಭ್ರಮನಿರಸನಗೊಳಿಸುವಂತೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೊಡಗಿನ ಅಸ್ಮಿತೆಯಾಗಬೇಕಿದ್ದ ಸಂಸ್ಥೆಯೊAದನ್ನು ಬೆಳೆಯುವ ಮೊದಲೇ ಚಿವುಟುವ ಕೆಲಸ ಮಾಡಲಾಗಿದೆ.

ಮುಚ್ಚಲ್ಪಡುವ ನೂತನ ವಿವಿಗಳ ಪಟ್ಟಿಯಲ್ಲಿ ಬೀದರ್ ವಿವಿ ಇಲ್ಲದಿರುವುದು ಸರ್ಕಾರದ ಮಟ್ಟದಲ್ಲಿ ಅಲ್ಲಿಯ ಜನಪ್ರತಿನಿಧಿಗಳ ಪ್ರಭಾವವನ್ನು ತೋರಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕೊಡಗಿನಲ್ಲೂ ಈಗ ಎರಡೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಶಾಸಕರು ಇದ್ದಾರೆ. ಅದರಲ್ಲೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಪ್ರಭಾವಿ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಪ್ರಯತ್ನಪಟ್ಟರೆ ಕೊಡಗು ವಿವಿ ಉಳಿಸಿಕೊಳ್ಳುವುದು ಕಷ್ಟವೇನಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net