

ಚಿಕ್ಕಮಗಳೂರು: ಅಸಂಖ್ಯಾತ ಭಕ್ತರ ಶ್ರದ್ಧಾಭಕ್ತಿಯ ನಡುವೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿಯ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಪೂಜೆ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ಜರುಗಿತು. ಸ್ತುತಿ ಘೋಷ ಪಠಿಸುತ್ತ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಅಲಂಕೃತ ಬ್ರಹ್ಮರಥದ ಬಳಿ ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಲಾಯಿತು. ಭಕ್ತರು ದೇವರಿಗೆ ಫಲ-ಪುಷ್ಪ, ಅರ್ಚನೆ ಸೇವೆ ಮಾಡಿದರು. ಕಾಫಿ, ಕಾಳುಮೆಣಸು, ಏಲಕ್ಕಿ ಮತ್ತಿತರ ಧಾನ್ಯಗಳನ್ನು ಬ್ರಹ್ಮರಥಕ್ಕೆ ಎರಚಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದರು. ಅಲಂಕೃತಗೊಂಡ ಬ್ರಹ್ಮರಥವನ್ನು ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಎಳೆದರು.
ಸಾಲಂಕೃತಗೊಂಡ ಊರು:
ಹೊರನಾಡಲ್ಲಿ ಬೆಳಗ್ಗೆಯಿಂದಲೇ ಜನಜಂಗುಳಿ ಇತ್ತು. ಹೊರನಾಡು ಸುತ್ತಮುತ್ತಲಿನ ಕಳಸ, ಚಿಕ್ಕನಕುಡಿಗೆ, ಬಲಿಗೆ,ಬಾಳೆಹೊಳೆ, ಕುದುರೆಮುಖ, ಜಾಂಬ್ಳೆ, ನೆಲ್ಲಿಬೀಡು ಮುಂತಾದೆಡೆಯಿಂದ ನೂರಾರು ಭಕ್ತರು ಆಗಮಿಸಿ ಮಾತೆಗೆ ತಲೆಬಾಗಿ ಗಂಧಪ್ರಸಾದ ಸ್ವೀಕರಿಸಿದರು. ಊರಿಗೆ ಊರನ್ನು ಸ್ವಚ್ಛಗೊಳಿಸಿ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಇಡೀ ದೇವಾಲಯ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು.
ರಾಜಬೀದಿ ಉತ್ಸವದಲ್ಲಿ ಭಕ್ತಿಯ ಸಮರ್ಪಣೆ:
ರಾತ್ರಿ ಜರುಗಿದ ರಾಜಬೀದಿ ಉತ್ಸವದಲ್ಲಿ ಭಕ್ತರು ಹಣ್ಣು-ಕಾಯಿ, ಫಲ-ಪುಷ್ಪಗಳನ್ನು ಅರ್ಪಿಸಿದರು. ರಾಜಬೀದಿಯಲ್ಲಿ ರಥ ಸಾಗುವಾಗ ಪಟಾಕಿ, ಸಿಡಿಮದ್ದು ಪ್ರದರ್ಶನ, ಚಂಡೆ, ಓಲಗ, ವಿವಿಧ ವಿನೋದಾವಳಿ ಜಾತ್ರೆಗೆ ಬಂದ ಜನಸಾಗರದ ಜನಮನ ರಂಜಿಸಿದವು. ದೇವಾಲಯ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಮತ್ತು ಕುಟುಂಬದವರು ಭವ್ಯ ರಥೋತ್ಸವಕ್ಕೆ ಸಾಕ್ಷಿಯಾದರು.
ದೇಗುಲದಿಂದ ಸಕಲ ವ್ಯವಸ್ಥೆ:
ದೂರದೂರಿನಿಂದ ಬಂದ ಭಕ್ತರಿಗೆ ಊಟೋಪಚಾರ, ವಸತಿ ವ್ಯವಸ್ಥೆಯನ್ನು ದೇವಾಲಯದಿಂದ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಭಕ್ತರಿಗೆ ತೊಂದರೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿತ್ತು. ದೇವಸ್ಥಾನದ ಆವರಣ ಮತ್ತು ಜನಸಂದಣಿ ಹೆಚ್ಚು ಇರುವಲ್ಲಿ ಆಗಾಗ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿತ್ತು.