ಶಿಳ್ಳೇಕ್ಯಾತರ ಸಮಸ್ಯೆ ಆಲಿಸಿದ ತಹಸೀಲ್ದಾರ್

MKG
Published on

ಹೊನ್ನಾಳಿ: ಸುಮಾರು 40 ವರ್ಷಗಳಿಂದ ಖಾಸಗಿಯವರ ಸ್ಥಳದಲ್ಲಿ ವಾಸ ಮಾಡುತ್ತಿರುವ ಶಿಳ್ಳೇಕ್ಯಾತ ಜನಾಂಗದವರಿಗೆ ಸ್ವಂತ ಜಾಗ ನೀಡಲು ಸರ್ಕಾರಿ ಅಥವಾ ಗೋಮಾಳ ಜಾಗ ಗುರುತಿಸಲು ರಾಜಸ್ವ ನಿರೀಕ್ಷಕರಿಗೆ ಸೂಚಿಸಿದ್ದೇನೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ತಿಳಿಸಿದರು.

ಹೊನ್ನಾಳಿ ಪುರಸಭೆ ವ್ಯಾಪ್ತಿಗೆ ಇತ್ತೀಚೆಗೆ ಸೇರಿರುವ ದೇವನಾಯಕನಹಳ್ಳಿಯ ಶಿಳ್ಳೇಕ್ಯಾತ ಜನರ ಹಾಡಿಗೆ ಶುಕ್ರವಾರ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ಶಿಳ್ಳೇಕ್ಯಾತ ಸಮಾಜದ ಮುಖಂಡರು ಮಾತನಾಡಿ, ತಮಗೆ ವಾಸ ಮಾಡಲಿಕ್ಕೆ ಸೂಕ್ತ ಸರ್ಕಾರಿ ನಿವೇಶನ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ತಾವು ಕಳೆದ 40 ವರ್ಷಗಳಿಂದ ಖಾಸಗಿಯವರ ಸ್ವತ್ತಿನಲ್ಲಿ ವಾಸ ಮಾಡುತ್ತಿದ್ದೇವೆ. ಇದೀಗ ಅವರು ಜಾಗ ತೆರವುಗೊಳಿಸುವಂತೆ ತಿಳಿಸಿದ್ದಾರೆ. ಇದರಿಂದ ಮುಂದೆ ಎಲ್ಲಿಗೆ ಹೋಗುವುದು ಎಂಬ ಆತಂಕ ಶುರುವಾಗಿದೆ ಎಂದು ಹೇಳಿದರು.

ಆದ್ದರಿಂದ ನಮಗೆ ಸೂಕ್ತ ನಿವೇಶನ, ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು. ನಮಗೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಇದೆ. ಆದರೆ, ವಾಸ ಮಾಡಲು ಜಾಗವಿಲ್ಲ. ನಮ್ಮ ಜೀವನ ಕಾಡು ಜನರಿಗಿಂತ ಕಡೆಯಾಗಿದೆ ಎಂದು ತಹಸೀಲ್ದಾರ್ ಬಳಿ ಅಳಲು ತೋಡಿಕೊಂಡರು.

ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಯಾವುದಾದರೂ ಸರ್ಕಾರಿ ಗೋಮಾಳ ಅಥವಾ ಸರ್ಕಾರಿ ಜಾಗ ಸಿಕ್ಕ ಕೂಡಲೇ ನಿಮಗೆ ಸ್ಥಳಾವಕಾಶ ಕಲ್ಪಿಸುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕುರುವ ಮಂಜುನಾಥ್ ಸೇರಿದಂತೆ ಶಿಳ್ಳೇಕ್ಯಾತ ಸಮಾಜದ ಜನರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net