ಬಡರೋಗಿಗಳ ಪಾಲಿಗೆ ಯಶಸ್ವಿನಿ ಆಶಾಕಿರಣ

Hope for success for poor patients
Published on

ಮಡಿಕೇರಿ:

ಸರ್ಕಾರದ ಮಹತ್ವಕಾಂಕ್ಷಿ ಆರೋಗ್ಯ ರಕ್ಷಣಾ ಯೋಜನೆಯಾಗಿರುವ 'ಯಶಸ್ವಿನಿ' ಜಿಲ್ಲೆಯ ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿದೆ. ರಾಜ್ಯದಲ್ಲಿ 2022 ನವೆಂಬರ್‌ನಲ್ಲಿ ಮರು ಆರಂಭವಾಗಿರುವ ಯೋಜನೆ ಆಡಿಯಲ್ಲಿ ಪ್ರಸಕ್ತ ಸಾಲಿಗೆ ಕೊಡಗಿನ ವಿವಿಧ ಸಹಕಾರ ಸಂಘಗಳ 78,219 ಸದಸ್ಯರು ನೋಂದಾಯಿಸಿಕೊAಡಿದ್ದಾರೆ. ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಇಲ್ಲಿಯ ತನಕ 166 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಯಶಸ್ವಿನಿ ಯೋಜನೆಯನ್ನು ಈ ವರ್ಷದಿಂದ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕ್ರಮ ತೆಗೆದುಕೊಂಡಿದೆ.ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಸಹಕಾರಿ ಸಂಘಗಳ ಸದಸ್ಯರಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ 2003ರಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಗೆ ಚಾಲನೆ ನೀಡಿತ್ತು. ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ' ಇದಾಗಿದ್ದರೂ ಈಗ ನಗರ ಪ್ರದೇಶದ ಸಹಕಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರಚಿಕಿತ್ಸೆಯ ಸೇವೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯುವ ಸೌಲಭ್ಯವಿದೆ.

ಯಶಸ್ವಿನಿ ಆರೋಗ್ಯ ಯೋಜನೆಯನ್ನು 2018ರ ಮೇ 31ಕ್ಕೆ ರದ್ದು ಮಾಡಿ, ಅದೇ ವರ್ಷ ಜೂ.1ಕ್ಕೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಈ ಯೋಜನೆ ಮತ್ತೆ ಜಾರಿಗೆ ತರುವಂತೆ ರೈತರು ಮತ್ತು ಸಹಕಾರಿ ಸಂಘಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆ ಮರು ಆರಂಭದ ಘೋಷಣೆ ಮಾಡಿ 300 ಕೋಟಿ ರೂ. ತೆಗೆದಿಟ್ಟಿದ್ದರು. 2022ರ ನ. 1ರಿಂದ ಈ ಯೋಜನೆಗೆ ನೋಂದಣಿ ಆರಂಭವಾಗಿತ್ತು.

2022-23ನೇ ಸಾಲಿಗೆ ಕೊಡಗಿನಲ್ಲಿ ಗ್ರಾಮೀಣ ಪ್ರದೇಶದ 78,885 ಮತ್ತು ನಗರ ಪ್ರದೇಶದ 1,627 ಸೇರಿದಂತೆ ವಿವಿಧ ಸಹಕಾರಿ ಸಂಘಗಳ 80,512 ಸದಸ್ಯರು ಯಶಸ್ವಿನಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊAಡಿದ್ದರು. ಇದೇ ವರ್ಷ 413 ಫಲಾನುಭವಿಗಳು 31,38,100 ರೂ. ಮೊತ್ತದ ಚಿಕಿತ್ಸೆ ಪ್ರಯೋಜವನ್ನು ಈ ಯೋಜನೆ ಮೂಲಕ ಪಡೆದಿಕೊಂಡಿದ್ದಾರೆ. 2023-224ನೇ ಸಾಲಿಗೆ ಗ್ರಾಮೀಣ ಪ್ರದೇಶದ 77,431 ಮತ್ತು ನಗರ ಪ್ರದೇಶದ 788 ಸೇರಿದಂತೆ 78,219 ವಿವಿಧ ಸಹಕಾರಿ ಸಂಘಗಳ ಸದಸ್ಯರು ಈ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ. ಪ್ರಸಕ್ತ ವರ್ಷದಲ್ಲ ಇಲ್ಲಿಯ ತನಕ 166 ಫಲಾನುಭವಿಗಳು 12,74,250 ರೂ. ಮೊತ್ತದ ಚಿಕಿತ್ಸೆಯ ಲಾಭವನ್ನು ಯೋಜನೆಯಿಂದ ಹೊಂದಿಕೊAಡಿದ್ದಾರೆ.
ಕೊಡಗಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಕುಶಾಲನಗರ ಕಾವೇರಿ ಆಸ್ಪತ್ರೆ, ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಲೈಫ್‌ಲೈನ್ ಆಸ್ಪತ್ರೆ, ಸ್ಮಿತಾ ಐ ಕೇರ್ ಆಸ್ಪತ್ರೆ, ಲೋಪಾಮುದ್ರಾ ದೃಷ್ಟಿ ಕಣ್ಣಿನ ಆಸ್ಪತ್ರೆ, ವಿರಾಜಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆ ಯಶಸ್ವಿ ಯೋಜನೆಯ ನೆಟ್‌ವರ್ಕ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಆರಂಭದಲ್ಲಿ 823 ಶಸ್ತçಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆ ಅಡಿಯಲ್ಲಿ ಮಾಡಲಾಗುತ್ತಿತ್ತು. ಯೋಜನೆ ಮರು ಜಾರಿ ಆದ ನಂತರ 1650 ಬಗೆಯ ಶಸ್ತçಚಿಕಿತ್ಸೆಗಳನ್ನು ಈ ಯೋಜನೆ ಅಡಿಯಲ್ಲಿ ಒದಗಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಸಹಕಾರಿ ಸಂಘ, ಸಹಕಾರಿ ಬ್ಯಾಂಕ್‌ಗಳ ರೈತ ಸದಸ್ಯರಲ್ಲದೆ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರೂ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮೂಲಕ ಯೋಜನೆ ಅನುಷ್ಠಾನದಲ್ಲಿದೆ. ಯೋಜನೆ ಅಡಿಯಲ್ಲಿ ನೋಂದಾಯಿತರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗುತ್ತದೆ.

ಯಶಸ್ವಿನಿ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿ ಬೇಡ. ಇದರಿಂದಾಗಿ ಸಮಯದ ಉಳಿತಾಯ ಆಗುತ್ತದೆ. ಜತೆಗೆ ಸೂಕ್ತ ಕಾಲದಲ್ಲಿ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಸಿಗುವಂತಾಗುತ್ತದೆ. ಇದರಿಂದಾಗಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲೂ ನಗದು ರಹಿತ ಗುಣಮಟ್ಟದ ಚಿಕಿತ್ಸೆ ರೋಗಿಗಳಿಗೆ ಸಿಗುವಂತಾಗಿದೆ. ಮೊದಲೇ ಹಣ ಕಟ್ಟಿ ದಾಖಲಾಗಬೇಕು ಎನ್ನುವ ಸಂಕಷ್ಟದಿAದಲೂ ಮುಕ್ತಿ ಸಿಕ್ಕಂತಾಗಿದೆ.

ಯಶಸ್ವಿನಿ ಯೋಜನೆಯ ಸದಸ್ಯರಿಗೆ ಜನರಲ್ ವಾರ್ಡ್ನಲ್ಲಿ ಚಿಕಿತ್ಸಾ ಸೌಲಭ್ಯ ಸಿಗುತ್ತದೆ. ವಿಶೇಷ ವಾರ್ಡ್ ಸವಲತ್ತು ಬೇಕಿದ್ದಲ್ಲಿ ಶೇ. 15 ಅಥವಾ ಶೇ. 25ರಷ್ಟು ಹೆಚ್ಚಳದೊಂದಿಗೆ ಇಂಥ ವಾರ್ಡ್ ಸೌಲಭ್ಯ ಪಡೆಯಲೂ ಅವಕಾಶ ಇದೆ. ಇದಕ್ಕೆ ತಗುಲುವ ಹೆಚ್ಚುವರಿ ಮೊತ್ತ ರೋಗಿಗಳೇ ಭರಿಸಬೇಕು. ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆಯ ವೆಚ್ಚ, ಆಪರೇಷನ್ ಥೀಯೆಟರ್ ಬಾಡಿಗೆ, ಅರವಳಿಕೆ ತಜ್ಞರ ಫೀ, ಸರ್ಜನ್ ಫೀ, ಕನ್ಸಲ್‌ಟೆಂಟ್ ಫೀ, ಬೆಡ್ ಚಾರ್ಜ್, ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ನೋಂದಣಿಗೆ ಕನಿಷ್ಠ 3 ತಿಂಗಳು ಮೊದಲು ಕುಟುಂಬದ ಒಬ್ಬ ಸದಸ್ಯ ಅರ್ಹ ಸಹಕಾರ ಸಂಘವೊAದರ ಸದಸ್ಯರಾಗಿರಬೇಕು. ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿ ಆಗಬಹುದು. ಪ್ರಧಾನ ಅರ್ಜಿದಾರ ಮತ್ತು ಅವನ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದಲ್ಲಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಾಸಿಕ 30 ಸಾವಿರಕ್ಕಿಂತ ಹೆಚ್ಚು ಅಥವಾ ವಾರ್ಷಿಕ ರೂ.3.60 ಲಕ್ಷ ರೂ.ಗಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆಯಲು ಆಗುವುದಿಲ್ಲ.

ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬAಧಿಸಿದ ರೋಗಗಳು, ಕಿವಿ, ಮೂಗು, ಗಂಟಲು ಸಮಸ್ಯೆಗಳು, ಕರುಳಿನ ಕಾಯಿಲೆಗಳು, ನರಗಳಿಗೆ ಸಂಬAಧಿಸಿದ ಕಾಯಿಲೆಗಳು, ಕಣ್ಣಿನ ಕಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬAಧಿಸಿದ ಕಾಯಿಲೆಗಳು ಹಾಗೂ ಈ ಯೋಜನೆಯಡಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬAಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು
ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ಸಾಮಾನ್ಯ ಹೆರಿಗೆ, ನವಜಾತ ಶಿಶುವಿನ ಶುಶ್ರೂಷೆ, ಕೃಷಿ ಉಪಕರಣಗಳಿಂದಾಗುವ ಅಪಘಾತಗಳು, ನೀರಿನಲ್ಲಿ ಮುಳುಗುವುದು, ನಾಯಿ ಕಡಿತ, ಹಾವು ಕಡಿತ, ಹೋರಿ ತಿವಿತ, ವಿದ್ಯುತ್ ಆಘಾತಗಳಿಗೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ಸಿಗುತ್ತದೆ. ಆದರೆ ಕೀಮೊಥೆರಪಿ, ರೇಡಿಯೋ ಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟ ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್, ಸ್ಟಂಟ್, ಇಂಪ್ಲಾAಟ್ಸ್ ಇತ್ಯಾದಿ ಸೌಲಭ್ಯಗಳು ಯೋಜನೆಯಲ್ಲಿ ಇಲ್ಲ.

ಯಶಸ್ವಿನಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಪ್ರಸಕ್ತ ಸಾಲಿನಿಂದ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರನ್ನು ಯೋಜನೆಯಡಿ ಅರ್ಹ ಸದಸ್ಯರನ್ನಾಗಿ ಮಾಡಲಾಗಿದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸದಸ್ಯರಿಗೆ ಪ್ರತಿ ವರ್ಷಕ್ಕೆ ಬದಲಾಗಿ ಮೂರು ವರ್ಷಗಳಿಗೆ ಒಂದೇ ಬಾರಿ ಯಾವುದೇ ವಂತಿಗೆ ಇಲ್ಲದೇ ಐಡಿ ಕಾರ್ಡ್ ಒದಗಿಸಲಾಗುತ್ತಿದೆ.
ಮಾಸಿಕ 30 ಸಾವಿರ ರೂ. ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ರಾಜ್ಯ ಸಹಕಾರ ಸಂಘಗಳ ನೌಕರರು ಹಾಗೂ ಅವರ ಅವಲಂಬಿತರಿಗೆ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕೆ.ಎನ್. ರಾಜಣ್ಣ, ಸಹಕಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net