

ಕೋಲಾರ : ರೈತರು ದಲ್ಲಾಳಿಗಳ ಕಪಿಮುಷ್ಟಿಯಿಂದ ಹೊರತಾಗಿ ಹಣ್ಣು, ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸ್ಥಾಪಿಸಿಕೊಂಡಿದ್ದ ನೇರ ಮಾರುಕಟ್ಟೆ ಹಾಪ್ಕಾಮ್ಸ್ ಸಹಕಾರ ಸಂಸ್ಥೆ ಈಗ ದಿನೇದಿನೆ ಸೊರಗುತ್ತಿದ್ದು, ಸಂಸ್ಥೆಯ ಅಧ್ಯಕ್ಷ ಗೋಪಾಲ್ಕೃಷ್ಣೇಗೌಡ ಅವರ ತವರು ಜಿಲ್ಲೆಯಲ್ಲಿಯೇ ಅವನತಿ ಹಾದಿ ಹಿಡಿದಿದೆ.
ಮೂರು ದಶಕಗಳ ಹಿಂದೆ ಲಾಲ್ಬಾಗ್ ಸಂಯುಕ್ತಾಶ್ರಯದಲ್ಲಿ ಸ್ಥಾಪನೆಗೊಂಡ ಹಾಪ್ಕಾಮ್ಸ್ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರೈತರಿಂದ ಹಣ್ಣು, ತರಕಾರಿಗಳನ್ನು ಯಾವುದೇ ದಲ್ಲಾಳಿ ಇಲ್ಲದೆ, ನೇರವಾಗಿ ಖರೀದಿ ಮಾಡಲು ಖರೀದಿ ಕೇಂದ್ರ ಸ್ಥಾಪಿಸಿ, ಪ್ರತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಅಂಗಡಿ ತೆರೆದು ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಣ್ಣು, ತರಕಾರಿ ಮಾರಾಟ ಮಾಡುವ ಮೂಲಕ ಲಾಭ ಗಳಿಸುವ ಜತೆಗೆ ರೈತರಿಗೂ ವರದಾನವಾಗಿತ್ತು.
ಆದರೆ, ಬಂಡವಾಳ ಶಾಹಿಗಳ ಕೆಂಗಣ್ಣಿಗೆ ಗುರಿಯಾದ ಹಾಪ್ಕಾಮ್ಸ್ 10 ವರ್ಷಗಳಿಂದ ಕ್ಷೀಣಿಸುತ್ತಿದ್ದು, ಈಗ ಬಹುತೇಕ ಅಂಗಡಿಗಳು ಮುಚ್ಚಿದರೆ, ಇರುವ ಖರೀದಿ ಕೇಂದ್ರದಲ್ಲಿಯೂ ಕೇವಲ ಕೆಜಿಗಳ ಲೆಕ್ಕದಲ್ಲಿ ರೈತರಿಂದ ಹಣ್ಣು, ತರಕಾರಿ ಖರೀದಿ ಮಾಡುವ ಶೋಚನೀಯ ಸ್ಥಿತಿ ಇದೆ.
ಸಹಕಾರಿ ಕೇಂದ್ರವಾಗಿರುವ ಕೋಲಾರದಲ್ಲಿ 1991ರಲ್ಲಿ ಸ್ಥಾಪನೆಗೊಂಡು ಸತತ ಎರಡು ದಶಕಗಳ ಕಾಲ ಯಶಸ್ವಿಯಾಗಿ ಮುನ್ನಡೆ ಕಂಡಿತ್ತು. ಕೋಲಾರ ಜಿಲ್ಲೆಯೊಂದರಲ್ಲಿಯೇ 38 ಹಾಪ್ ಕಾಮ್ಸ್ ಮಳಿಗೆ ತೆರೆದು, ಉತ್ತಮ ವಹಿವಾಟು ನಡೆಸಲಾಗುತ್ತಿತ್ತು. ರೈತರಿಂದ ನೇರ ಖರೀದಿ ಮಾಡುತ್ತಿದ್ದರಿಂದ ಗಳಿಸುತ್ತಿದ್ದ ಲಾಭಾಂಶ ರೈತರಿಗೂ ಸೇರುತ್ತಿತ್ತು. ಆದರೆ, 10 ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಮಳಿಗೆಗಳು ಪ್ರಾರಂಭಿಸಿ, ಈಗ ಜಿಲ್ಲೆಯಲ್ಲಿ
ಶ್ರೀನಿವಾಸಪುರ-, ಮುಳಬಾಗಿಲು-, ಬಂಗಾರಪೇಟೆ-, ಕೋಲಾರ-ಯಲ್ಲಿ ತಲಾ 1ರಂತೆ ಒಟ್ಟು 4 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
ರಸ್ತೆ ವಿಸ್ತರಣೆ ನೆಪದಲ್ಲಿ ಅಂಗಡಿ ತೆರವು ಹಾಗೂ ಸಿಬ್ಬಂದಿ ಇಲ್ಲದ ಕಾರಣ ಜಿಲ್ಲೆಯಲ್ಲಿ 4 ಅಂಗಡಿಗಳು ಮಾತ್ರ ಕಾರ್ಯನಿರ್ವಜಿಸುತ್ತಿವೆ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.
ಹೆಚ್ಚಳಕ್ಕೆ ಬೇಕಿದೆ ಇಚ್ಛಾಶಕ್ತಿ: ಈಗ ಮಾವಿನ ಸುಗ್ಗಿ ಪ್ರಾರಂಭವಾಗಿದ್ದು, ಹಾಪ್ಕಾಮ್ಸ್ ಕಾರ್ಯ ಪ್ರವೃತ್ತರಾಗಿ ರೈತರಿಂದ ಹೆಚ್ಚು ಮಾವು ಖರೀದಿಸಿ ನಗರ ಪ್ರದೇಶಗಳ ಮಾಲ್ಗಳ ಸಹಭಾಗಿತ್ವದಲ್ಲಿ ಮಾಲ್ಗಳ ಮುಂಭಾಗ ವ್ಯಾಪಾರ ಕೇಂದ್ರ ತೆರೆದು ವಹಿವಾಟು ನಡೆಸಿದರೆ ಹಾಪ್ಕಾಮ್ಸ್ ಸಹಕಾರಿ ಸಂಸ್ಥೆಗೆ ಹೆಚ್ಚು ಉತ್ತೇಜನ ನೀಡಬಹುದಾಗಿದೆ. ಇದರಿಂದ ರೈತರೂ ದಲ್ಲಾಳಿಗಳ ಹಾವಳಿ ಇಲ್ಲದೆ ಹೆಚ್ಚು ಲಾಭ ಗಳಿಸಬಹುದಾಗಿದೆ.
ರಾಜ್ಯದಲ್ಲಿ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವ ಜಿಲ್ಲೆಗಳಲ್ಲಿ ಒಂದಾದ ಕೋಲಾರದಲ್ಲಿ ಹಾಪ್ಕಾಮ್ಸ್ ಸಹಕಾರಿ ವಲಯವನ್ನು ಅಭಿವೃದ್ಧಿಪಡಿಸಿ ನಂದಿನಿ ಪಾರ್ಲರ್ ರೀತಿ ಪ್ರಮುಖ ಜನಬಿಡ ಮತ್ತು ವಸತಿ ಪ್ರದೇಶಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಹೆಚ್ಚು ಹೆಚ್ಚು ತೆರೆದು ಗ್ರಾಹಕರಿಗೆ ನೇರವಾಗಿ ರೈತರಿಂದ ಖರೀದಿಸಿದ ಹಣ್ಣು ತರಕಾರಿಗಳನ್ನು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಿ ರೈತರನ್ನು ದಲ್ಲಾಳಿದಾರರಿಂದ ಮುಕ್ತಿಗೊಳಿಸಬೇಕಿದೆ. -ಚಿನ್ನಪ್ಪರೆಡ್ಡಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ