

ಮಂಡ್ಯ: ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ ಮಳಿಗೆ ರೀತಿಯಲ್ಲಿಯೇ ಕಬ್ಬಿನ ಜ್ಯೂಸ್ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ತೋಟದ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಉಮ್ಮಡಹಳ್ಳಿ ಯು.ಸಿ.ಶೇಖರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ತೋಟದ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ನಗರದ ಪ್ರಮುಖ ಜನಸಂದಣಿ ವೃತ್ತಗಳಲ್ಲಿ ಕಬ್ಬು ಜ್ಯೂಸ್ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಇದು ಕಡಿಮೆ ಬಂಡವಾಳದಲ್ಲಿ ಲಾಭವಿದೆ, ಸಂಘಕ್ಕೆ ಆದಾಯ ಹೆಚ್ಚಾಗಲಿದೆ ಎಂದರು.
ಎಲ್ಲ ನಿರ್ದೇಶಕರು-ಸದಸ್ಯರು, ನೌಕರರ ಸಹಕಾರದಿಂದ ಸಂಘವು ಹಂತ ಹಂತವಾಗಿ ಅಭಿವೃದ್ದಿ ಹೊಂದುತ್ತಿದೆ. ಲಾಭದಲ್ಲಿ ಸಂಘವು ಮುನ್ನಡೆಯುತ್ತಿದೆ, ಇದಕ್ಕೆ ಸಹಕಾರ ನೀಡಿದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕಳೆದ 12 ವರ್ಷದಿಂದ ನಷ್ಟದಲ್ಲಿ ನಡೆಯುತ್ತಿದ್ದ ಸಂಘವನ್ನು ಮಾಜಿ ಅಧ್ಯಕ್ಷ ಡಿ.ಕೃಷ್ಣೇಗೌಡ ಆಡಳಿತಾವಧಿಯಲ್ಲಿ 9.82 ಲಕ್ಷ ರೂ ಲಾಭ ಆಗಿದೆ. ಅವರ ದಕ್ಷತೆಯನ್ನು ಎಲ್ಲರೂ ಸ್ಮರಿಸುವಂತದ್ದು. ಮುಂದಿನ ದಿನಗಳಲ್ಲಿ ಸಂಘದ ಆದಾಯವನ್ನು ಮತ್ತಷ್ಟು ಹೆಚ್ಚಿಸಿ, ಲಾಭ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬೋಜನಾಯಕ, ನಿರ್ದೇಶಕರಾದ ಎಸ್.ನಾಗೇಂದ್ರ, ಕೆ.ಜಿ.ತಮ್ಮಣ್ಣ, ಡಿ.ಕೃಷ್ಣೇಗೌಡ, ಬಿ.ಎಸ್.ರಾಮಚಂದ್ರ, ಕಾಳಯ್ಯ, ಸಿದ್ದರಾಮೇಗೌಡ, ಕೆ.ಎನ್.ಕೃಷ್ಣೇಗೌಡ, ಕೆ.ಮಹೇಶ್, ಇಂದ್ರಮ್ಮ, ಪುಟ್ಟಲಿಂಗಮ್ಮ, ಬಿ.ಪುಟ್ಟಬಸವೇಗೌಡ, ರಮೇಶ್ ಚಂಗಪ್ಪ, ರೇಖಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್‌ಕುಮಾರ್ ಇತರರಿದ್ದರು.