

ಯೋಗ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಪ್ರತಿಪಾದನೆ | ಹೂವಿನಹಡಗಲಿಯಲ್ಲಿ ಜಾಗೃತಿ ಜಾಥಾ
ಹೂವಿನಹಡಗಲಿ: ನಾವೆಲ್ಲರೂ ನಿರಂತರವಾಗಿ ಯೋಗಾಭ್ಯಾಭ್ಯಾಸ ಮಾಡುವುದರಿಂದ ರೋಗ ಮುಕ್ತರಾಗಬಹುದು ಎಂದು ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಹೇಳಿದರು.
ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಮತ್ತು ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್, ಪತಂಜಲಿ ಯೋಗ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್. ಮಾತನಾಡಿ, ಒತ್ತಡದಿಂದ ಶುಗರ್, ಬಿಪಿ ಬರುತ್ತಿವೆ. ಇದರಿಂದ ಮುಕ್ತರಾಗಲು ಯೋಗ, ಧ್ಯಾನ ಉಪಯುಕ್ತ. ನಾನು ವೈದ್ಯಾನಾಗಿದ್ದು, ಅನೇಕ ಒತ್ತಡಗಳನ್ನು ಎದುರಿಸುತ್ತಿದ್ದೇನೆ. ಇದರಿಂದ ಹೊರ ಬರಲು ನಿಯಮಿತ ಸಮಯದಲ್ಲಿ ಯೋಗಾಭ್ಯಾಸ ಮಾಡುತ್ತೇನೆ ಎಂದರು.
ಪತಂಜಲಿ ಯೋಗ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಲಕ್ಷ್ಮಣನಾಯ್ಕ ಲಮಾಣಿ, ಪತಂಜಲಿ ಯೋಗ ಚಾರಿಟಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಭರತ್ ಕುಮಾರ್ ಚವ್ಹಾಣ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಜಾಥಾಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ತಿಲಕರಾಜ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಉದಯರವಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕರಿಬಸಪ್ಪ, ನರ್ಸಿಂಗ್ ಕಾಲೇಜು ಆಡಳಿತಾಧಿಕಾರಿ ಎಂ ಈಶ್ವರ್, ಯೋಗ ಗುರುಗಳಾದ ಎಂ.ಬಸವರಾಜ್, ಮಲ್ಲಿಕಾರ್ಜುನ, ಎ.ಗುರುಸಿದ್ದಪ್ಪ, ಅಶೋಕ್, ನಾಗವೇಣಿ, ಹೆ.ಎಂ.ಶಿವಮೂರ್ತಯ್ಯ ಇತರರು ಇದ್ದರು.