

ಹೂವಿನಹಡಗಲಿ: ನಾಟಕಗಳು ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸಿ ಆತ್ಮಶಕ್ತಿ ತುಂಬಲಿವೆ ಎಂದು ನಿವೃತ್ತ ಪ್ರಾಚಾರ್ಯ ಡಾ.ರುದ್ರಪ್ಪ ಕೆ ಹೇಳಿದರು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಶನಿವಾರ ಪ್ರದರ್ಶನಗೊಂಡ ಪಿ.ಲಂಕೇಶ್ ಅವರ ತೆರೆಗಳು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಸೂಕ್ಷ್ಮ ಸಂವೇದನೆ ನೀಡುವ ಮೂಲಕ ನಾಟಕದ ಪ್ರೇಕ್ಷಕರು ಹಾಗೂ ಓದುಗರನ್ನು ಹೆಚ್ಚಿಸಿದ ಕೀರ್ತಿ ಪಿ.ಲಂಕೇಶ್ ಅವರಿಗೆ ಸಲ್ಲುತ್ತದೆ. ಮನುಷ್ಯ ನಿತ್ಯ ಜೀವನದಲ್ಲಿ ಅನುಭವಿಸುವ ಸುಖ-ದುಃಖಗಳನ್ನು ತೆರೆಯಮೇಲೆ ತರುವ ಪ್ರಯತ್ನವನ್ನು ಕಲಾವಿದರು ಮಾಡುತ್ತಾರೆ. ಆದರೆ ಪ್ರಸ್ತುತ ದಿನದಲ್ಲಿ ಕಲಾವಿದರು ಜೀವನ ಸಾಗಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಸುಮಾರು 60 ವರ್ಷಗಳಿಂದಲೂ ಈ ಭಾಗದಲ್ಲಿ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ರಂಗಭಾರತಿ ಸಂಸ್ಥೆ ಮಾಡುತ್ತಿದೆ ಎಂದರು.
ಕಸಾಪ ಮಾಜಿ ತಾಲೂಕು ಅಧ್ಯಕ್ಷ ತೋ.ಮ.ಶಂಕರಯ್ಯ, ಜಿಬಿಆರ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾವಿಜಯ, ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ, ನಾಟಕದ ನಿರ್ದೇಶಕ ಅಜಯ ಚಲವಾದಿ, ಕಲಾವಿದರಾದ ಜಯಣ್ಣ, ಮಂಜುನಾಥ ಪಾಟೀಲ, ಕೊಟ್ರಸ್ವಾಮಿ, ಎಸ್.ಮಧು ಇತರರಿದ್ದರು.