ಸೌಲಭ್ಯ ಬಳಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ; ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿಕೆ

04122022 hadagali sports
Published on

ಹೂವಿನಹಡಗಲಿ: ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಶಕ್ತರಾಗಬೇಕು ಎಂದು ವಿಜಯನಗರ ಸಿಇಒ ಹರ್ಷಲ್ ಬೋಯಲ್ ನಾರಾಯಣರಾವ್ ಹೇಳಿದರು.

ತಾಲೂಕಿನ ಇಟ್ಟಿಗಿ ಗ್ರಾಪಂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಸ್ವ ಉದ್ಯೋಗ ಕಲ್ಪಿಸಲು ಪೇವರ್ ಬ್ಲಾಕ್ ತಯಾರಿಕೆ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಹಿಳೆಯರು ಸ್ವ ಉದ್ಯೋಗವನ್ನು ಹೊಂದುವುದರ ಜೊತೆಗೆ ಆರ್ಥಿಕವಾಗಿ ಪ್ರಬಲತೆಯನ್ನು ಹೊಂದಿ ಸ್ವತಂತ್ರವಾಗಿ ಕುಟುಂಬ ನಿರ್ವಹಣೆ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರ್ಕಾರ ಮತ್ತು ಎನ್‌ಆರ್‌ಎಲ್‌ಎಂದಿಂದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.ಇಂತಹ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.

ನೀವು ತಯಾರಿಸಿದ ಪರಿಕರಗಳನ್ನು ಸರ್ಕಾರ ಖರೀದಿಸಿವಂತೆ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಮೈಲಾರ ಮತ್ತು ಉತ್ತಂಗಿ ಗ್ರಾಮಗಳಲ್ಲಿ ಸ್ಟಾೃಂಡ್‌ಪೋಸ್ಟ್‌ಗಳ ತಯಾರಿಕಾ ಘಟಕಗಳು ಪ್ರಾರಂಭವಾಗಿವೆ ಆ ಭಾಗದ ಸಂಜೀವಿನಿ ಮಹಿಳಾ ಒಕ್ಕೂಟದ ಮಹಿಳೆಯರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2022-23ರ ತಾಲೂಕು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉತ್ತಂಗಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಸಹಯೋಗದೊಂದಿಗೆ ಮಹಿಳಾ ಸ್ವಸಹಾಯ ಸಂಘಗಳಿಂದ ಸ್ಟ್ಯಾಂಡ್‌ಪೋಸ್ಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನರೇಗಾ ಸಹಾಯಕ ನಿರ್ದೇಶಕ ಯು.ಹೆಚ್.ಸೋಮಶೇಖರ್, ಉತ್ತಂಗಿ ಗ್ರಾಪಂ ಅಧ್ಯಕ್ಷೆ ಸುಂಕಮ್ಮನವರ ನೀಲಮ್ಮ, ಇಟ್ಟಗಿ ಗ್ರಾಪಂ ಅಧ್ಯಕ್ಷೆ ಚಲವಾದಿ ಪುಷ್ಪಾವತಿ, ಪಿಡಿಒ ಎಂ.ಪ್ರಕಾಶ್, ಬಿಇಒ ಎಸ್.ಎನ್.ಹಳ್ಳಿಗುಡಿ, ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net