

ಹೂವಿನಹಡಗಲಿ: ಕ್ರೀಡಾಪಟುಗಳಿಗೆ ಕ್ರೀಡೆಯ ಬಗ್ಗೆ ಸಿದ್ಧತೆ ಮತ್ತು ಬದ್ಧತೆ ಅಗತ್ಯ ಎಂದು ತಾಲೂಕು ದೈಹಿಕ ಅಧೀಕ್ಷಕ ಮುಸ್ತಫಾ ಎಸ್. ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ಮಟ್ಟದ ಪ್ರೌಢಶಾಲಾ ಖೋಖೋ ಪಂದ್ಯಾವಳಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿ, ಜಿಲ್ಲಾ ವಿಭಾಗ ಮತ್ತು ರಾಜ್ಯ ಮಟ್ಟದ ಕ್ರೀಡೆಯಲ್ಲಿ ಜಯಗಳಿಸಿ ತಾಲೂಕಿಗೆ ಕೀರ್ತಿ ತರುವಂತೆ ಮನವಿ ಮಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲ ವಾಗುತ್ತದೆ ಎಂದರು.
ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಫಿ ಖವಾಸ್ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಮೂಲಕ ಕ್ರೀಡೆಗಳನ್ನು ಸಂಘಟಿಸುವಲ್ಲಿ ದೈಹಿಕ ಶಿಕ್ಷಕರ ಕೊಡುಗೆ ಗಮನಾರ್ಹವಾಗಿದೆ ಎಂದರು.
ಬಾಲಕರ ಖೋಖೋ ಪಂದ್ಯಾವಳಿಯಲ್ಲಿ ತಾಲೂಕಿನ ಕುರುವತ್ತಿ ಗ್ರಾಮದ ಚಿಕ್ಕಿ ಚನ್ನಪ್ಪ ಅನುದಾನಿತ ಪ್ರೌಢಶಾಲೆ ಪ್ರಥಮ, ಮಹಜನದಹಳ್ಳಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ತಾಲೂಕಿನ ಸೋಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಥಮ, ಹಿರೇಮಲ್ಲನಕೆರೆ ಸರ್ಕಾರಿ ಪ್ರೌಢಶಾಲೆಗೆ ದ್ವಿತೀಯ ಸ್ಥಾನ ಲಭಿಸಿತು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿವಾನಂದಪ್ಪ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಮುಖ್ಯ ಗುರುಗಳಾದ ಗುರುಬಸವರಾಜ, ಸುರೇಶ ಅಂಗಡಿ, ಶೇಕ್ ಅಹ್ಮದ್, ದೈಹಿಕ ಶಿಕ್ಷಕರಾದ ಜೆ.ಪ್ರಸನ್ನ ಕುಮಾರ್, ಸ್ವಾಮಿನಾಥ ರಾಮಸ್ವಾಮಿ, ಬಾಷಾ ಕುರುವತ್ತಿ ಹಾಗೂ ವಿದ್ಯಾರ್ಥಿಗಳು ಇದ್ದರು.