

ಹೂವಿನಹಡಗಲಿ: ಹಳ್ಳಿಯ ಸರ್ಕಾರಿ ಶಾಲೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ಸರ್ಕಾರಗಳೇ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಒತ್ತು ನೀಡುವ ಮೂಲಕ ಕನ್ನಡ ಭಾಷೆಯನ್ನು ನಿರ್ಲಕ್ಷಿಸುತ್ತಿವೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಆರೋಪಿಸಿದರು.
ತಾಲೂಕಿನ ಮಾಗಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾರೋಪದಲ್ಲಿ ಶನಿವಾರ ಮಾತನಾಡಿದರು. ಗ್ರಾಮಸ್ಥರು ಕನ್ನಡ ಶಾಲೆಯನ್ನು 115 ವರ್ಷ ಉಳಿಸಿಕೊಂಡು ಬರುವ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ರಾಜ್ಯದಲ್ಲೇ ಬಹಳ ಅಪರೂಪದ ಶಾಲೆ ಇದಾಗಿದ್ದು, ಮಾದರಿಯಾಗಿದೆ ಎಂದರು.
ಕನ್ನಡ ಭಾಷೆ ಉಳಿವಿನ ಬಗ್ಗೆ ಸುದೀರ್ಘ ಚರ್ಚೆಯಾಗಬೇಕಿದೆ. ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಗೆ ಕಳಿಸಿ ಅವರ ಭವಿಷ್ಯ ಉತ್ತಮವಾಗಿಸಬೇಕು. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವುದರಿಂದ ಅವರು ವಿದೇಶಕ್ಕೆ ಹೋಗಿ ತಂದೆ ತಾಯಿ ಹಾಗೂ ಕುಟುಂಬದವ ಪ್ರೀತಿಯಿಂದ ದೂರವಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂಡರಗಿ ಸಂಸ್ಥಾನ ಮಠದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಾಜಿ ಶಾಸಕ ಬಿ.ಚಂದ್ರನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪೂಜಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಸೊನ್ನದ ಕೊಟ್ರೇಶ, ಪುತ್ರೇಶ, ಓದೋ ಗಂಗಪ್ಪ, ಕೆ.ಗೋವಿಂದರೆಡ್ಡಿ, ಬಿ.ಉಮೇಶಗೌಡ, ಎಲ್.ಮಹೇಶ, ಎಂ.ಮಾರುತಿ, ಬಾಷಾ ಸಾಹೇಬ್, ಜಾಫರ್ ಸಾಬ್ ಇತರರಿದ್ದರು.