ರಥಸಪ್ತಮಿ ದಿನ ಮೈಲಾರ ಜಾತ್ರೆಗೆ ಚಾಲನೆ, ಗೊರವಯ್ಯ ರಾಮಣ್ಣನಿಗೆ ಕಂಕಣಧಾರಣೆ

02022020 Hadagali Mylar Fair1
Published on

ಹೂವಿನಹಡಗಲಿ: ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ರಥ ಸಪ್ತಮಿ ದಿನವಾದ ಶನಿವಾರ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹಾಲು ಉಕ್ಕಿಸುವ ಮೂಲಕ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಜಾತ್ರೆಗೆ ಚಾಲನೆ ನೀಡಿದರು.

ರಾತ್ರಿ ಮೌನ ಮೆರವಣಿಗೆಯಲ್ಲಿ ಕಾರ್ಣಿಕದ ಸ್ಥಳ ಡೆಂಕನಮರಡಿಗೆ ತೆರಳಿ ಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. 11 ದಿನಗಳ ಕಾಲ ಸ್ವಾಮಿ ಮರಡಿಯಲ್ಲೇ ನೆಲೆಸುತ್ತಾನೆ. ಈ ಅವಧಿಯಲ್ಲಿ ದೇವಸ್ಥಾನದಲ್ಲಿ ಪೂಜೆ ಹಾಗೂ ಘಂಟಾನಾದ ಮೊಳಗುವುದಿಲ್ಲ. ಅರ್ಚಕರು ದೇವರಿದ್ದಲ್ಲಿಗೇ ತೆರಳಿ ದಿನಕ್ಕೆ ಎರಡು ಬಾರಿ ಪೂಜೆ ಸಲ್ಲಿಸಿ ಬರುತ್ತಾರೆ. 11ನೇ ದಿನವಾದ ಫೆ.11ರಂದು ದೈವವಾಣಿ (ಕಾರ್ಣಿಕೋತ್ಸವ) ಮೊಳಗಿದ ಬಳಿಕ ಸ್ವಾಮಿಯನ್ನು ಮರಳಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ್, ಸಿಪಿಐ ಮಾಲತೇಶ ಕೂನಬೇವು ಹಾಗೂ ಎಲ್ಲ ಬಾಬುದಾರರು ಹಾಜರಿದ್ದರು.

ಕಂಕಣಧಾರಣೆಯಲ್ಲಿ ಗೊಂದಲ: ಕಾರ್ಣಿಕ ನುಡಿಯುವ ಗೊರವಯ್ಯನಿಗೆ ಕಂಕಣಧಾರಣೆ ಮಾಡುವ ವಿಚಾರವಾಗಿ ಶನಿವಾರ ಗೊಂದಲ ಉಂಟಾಯಿತು. ರಥಸಪ್ತಮಿ ದಿನ ಗೊರವಯ್ಯ ಹಾಗೂ ಬಾಬುದಾರರಿಗೆ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಕಂಕಣಧಾರಣೆ ಮಾಡುವುದು ಸಂಪ್ರದಾಯ. ಆದರೆ, ಶನಿವಾರ ಕಂಕಣಧಾರಣೆ ಸಮಯಕ್ಕೆ ಗೊರವಯ್ಯ ರಾಮಣ್ಣ ಬಂದಿರಲಿಲ್ಲ. ಸ್ವಲ್ಪ ತಡವಾಗಿ ಬಂದ ಕಾರಣ ಕಂಕಣಧಾರಣೆ ಮಾಡಲು ಧರ್ಮಕರ್ತರು ನಿರಾಕರಿಸಿದರು. ಬಳಿಕ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಭೇಟಿ ನೀಡಿ, ಧರ್ಮಕರ್ತರೊಂದಿಗೆ ಮಾತುಕತೆ ನಡೆಸಿದರು. ಕೋರ್ಟ್ ತೀರ್ಪು ಬರುವವರೆಗೆ ಧಾರ್ಮಿಕ ಕಾರ್ಯ ತಡೆಯುವುದು ಸರಿಯಲ್ಲ. ಸದ್ಯದ ಕಾರ್ಯಕ್ರಮ ನಡೆಸಿಕೊಡಿ ಎಂದು ಹೇಳಿದರು. ಆಗ, ಧರ್ಮಕರ್ತರ ಸೂಚನೆಯಂತೆ ಅರ್ಚಕ ಪ್ರಮೋದ ಭಟ್ ಗೊರವಯ್ಯ ರಾಮಣ್ಣನಿಗೆ ಕಂಕಣಧಾರಣೆ ಮಾಡಿದರು.

ಗೊರವಯ್ಯ ರಾಮಣ್ಣ ಸುಕ್ಷೇತ್ರದ ಪರಂಪರೆ ಗೌರವಿಸುತ್ತಿಲ್ಲ. ಉದ್ದೇಶಪೂರ್ವಕವಾಗಿಯೇ ತಡವಾಗಿ ಬಂದಿದ್ದರಿಂದ ಕಂಕಣಧಾರಣೆ ಮಾಡಲಿಲ್ಲ. ಗೊರವಯ್ಯ ನೇಮಕ ಕುರಿತು ಫೆ.6ರಂದು ಕೋರ್ಟ್ ನೀಡುವ ತೀರ್ಪು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಹೋಗುವುದನ್ನು ನಿರ್ಧರಿಸಲಿದೆ. | ವೆಂಕಪ್ಪಯ್ಯ ಒಡೆಯರ್ ಧರ್ಮಕರ್ತ ಮೈಲಾರಲಿಂಗೇಶ್ವರ ದೇವಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net