ಪಪ್ಪಾಯಿ ಹಣ್ಣುಗಳನ್ನು ಖರೀದಿಸುವವರಿಲ್ಲದೇ ಜಮೀನಿನಲ್ಲೇ ಬೆಳೆ ನಾಶ ಮಾಡಿದ ರೈತರು

22042020 Hadagali Papaya fruit crop
Published on

ಹೂವಿನಹಡಗಲಿ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಣೆ ಮಾಡಲಾಗದೆ ತಾಲೂಕಿನ ರೈತರು ಪಪ್ಪಾಯಿ ಬೆಳೆಯನ್ನು ಜಮೀನಿನಲ್ಲೇ ಕಡಿದು ನಾಶ ಮಾಡುತ್ತಿದ್ದಾರೆ.

ತಾಲೂಕಿನ ಹಿರೇಹಡಗಲಿ ರೈತ ಯಲಗಚ್ಚಿನ ಪ್ರಕಾಶ್ ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿಯನ್ನು ಬುಧವಾರ ಕಡಿದು ನಾಶ ಮಾಡಿದರು. ಪ್ರತಿ ವರ್ಷ ಖಾಸಗಿ ಮಾರಾಟಗಾರರು ರೈತರ ಜಮೀನುಗಳಿಗೆ ತೆರಳಿ ಪಪ್ಪಾಯಿ ಹಣ್ಣನ್ನು ಖರೀದಿಸಿ ಹಣ ಕೊಡುತ್ತಿದ್ದರು. ಆದರೆ, ಈ ಬಾರಿ ಕರೋನಾ ವೈರಸ್ ಹರಡುವ ದಿಸೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದು, ಯಾವೊಬ್ಬ ಖರೀದಿದಾರರು ಜಮೀನುಗಳತ್ತ ಸುಳಿಯುತ್ತಿಲ್ಲ. ಇದರಿಂದ ಬೇಸತ್ತ ರೈತರು ಜಮೀನುಗಳಲ್ಲೇ ಹಣ್ಣು ಕೊಳೆಯುವುದನ್ನು ಕಂಡು ನಾಶ ಮಾಡುತ್ತಿದ್ದಾರೆ.

ಪರಿಹಾರ ಕೊಡಿ: ತಾಲೂಕಿನಲ್ಲಿ 250 ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯನ್ನು ಬೆಳೆಯಲಾಗಿದೆ. ಪಪ್ಪಾಯಿ ಬೆಳೆದ ರೈತರು ಸದ್ಯ ಸಂಕಷ್ಟಕ್ಕೀಡಾಗಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಖಾಸಗೀ ಖರೀದಿದಾರರನ್ನು ರೈತರಿಗೆ ಪರಿಚಯಿಸುತ್ತಿದ್ದಾರೆ. ಆದರೆ, ಲಾಕ್ ಡೌನ್ ಆಗಿದ್ದರಿಂದ ಖರೀದಿದಾರರು ಖರೀದಿಸುತ್ತಿಲ್ಲ. ಪಪ್ಪಾಯಿ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಕೂಡಲೇ ಪರಿಹಾರವನ್ನು ಕೊಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

ನಮ್ಮ ಜಮೀನಲ್ಲಿ ನಾಲ್ಕು ಎಕರೆ ಪಪ್ಪಾಯಿ ಬೆಳೆದಿದ್ದೇವೆ. ಲಾಕ್‌ಡೌನ್ ಆಗಿದ್ದರಿಂದ ಖರೀದಿದಾರರು ಬರುತ್ತಿಲ್ಲ. ಇದರಿಂದ ಬೇಸತ್ತು. ಪಪ್ಪಾಯಿ ಬೆಳೆಯನ್ನು ತೆಗೆದು ಹಾಕಿದ್ದೇವೆ. ಸರ್ಕಾರ ಪಪ್ಪಾಯಿ ಬೆಳೆಗಾರರ ನೆರವಿಗೆ ಬರಬೇಕು| ಯಲಗಚ್ಚಿನ ಪ್ರಕಾಶ್ ರೈತ ಹಿರೇಹಡಗಲಿ

ಹೂವಿನಹಡಗಲಿ ತಾಲೂಕಿನಲ್ಲಿ ಬೆಳೆದ ಪಪ್ಪಾಯಿಯನ್ನು ಖರೀದಿಸಲು ಇಲಾಖೆಯಿಂದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಕರೋನಾ ವೈರಸ್ ನಿಂದಾಗಿ ಖರೀದಿದಾದರು ಬರುತ್ತಿಲ್ಲ. ತಾಲೂಕಿನಲ್ಲಿ ಹಾಳಾದ ಪಪ್ಪಾಯಿ ಬೆಳೆಯ ಬಗ್ಗೆ ಸರ್ಕಾರಕ್ಕೆ ವರದಿ ಕೊಡುತ್ತೇವೆ.| ದುರ್ಗಾ ಪ್ರಸಾದ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net