

ಮೈಸೂರು: ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ತೀವ್ರ ಹಾಳಾಗಿದ್ದು, ವಾಹನಗಳು ಸಂಚರಿಸಲು ಕಷ್ಟವಾಗಿದೆ.
ರಾಣೆ ಮಡ್ರಾಸ್, ಆರ್‌ಪಿಜಿ ಕೇಬಲ್ ಕಾರ್ಖಾನೆಯನ್ನು ಸೇರಿಸುವ ಮುಖ್ಯರಸ್ತೆಯೇ ದುಸ್ಥಿತಿಗೆ ತಲುಪಿದ್ದು, ದೊಡ್ಡ ದೊಡ್ಡ ಟ್ರಕ್, ಲಾರಿಗಳು ಇನ್ನಿತರ ವಾಹನಗಳು ಸಂಚರಿಸುವ ಮಾರ್ಗ ಇದಾಗಿದೆ. ತಕ್ಷಣ ದುರಸ್ತಿಗೊಳಿಸುವಂತೆ ಚಾಮುಂಡಿಪುರಂನ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಿ.ಸಂದೀಪ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಕಚ್ಚಾ ಪದಾರ್ಥಗಳನ್ನು ತರುವ ಭಾರಿ ಗಾತ್ರದ ವಾಹನಗಳು, ದ್ವಿಚಕ್ರವಾಹನಗಳು ಸಾಗಲು ತೊಂದರೆ ಅಗಿದೆ. ಈ ರಸ್ತೆಯಲ್ಲಿ ಅದೆಷ್ಟೊ ಸವಾರರು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೊಳಗಾಗಿರುವ ಉದಾಹರಣೆ ದಿನೇದಿನೆ ಏರುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದೆ ಇರುವುದು ಖಂಡನೀಯ ಎಂದಿದ್ದಾರೆ.
ರಸ್ತೆಯನ್ನು ಸರಿಪಡಿಸಲು ಸಮಯ ಹಿಡಿದರೆ, ತಾತ್ಕಾಲಿಕವಾಗಿ ರಸ್ತೆಯನ್ನು ಬಂದ್ ಮಾಡಿ. ಪರ್ಯಾಯ ಮಾರ್ಗವನ್ನು ಸೂಚಿಸಬೇಕು. ಇಲ್ಲದಿದ್ದರೆ ಗುಂಡಿ ಬಿದ್ದ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಅಪಘಾತಕ್ಕೊಳಗಾಗಿ ಸಾವು ಸಂಭವಿಸಬಹುದು. ಆದ್ದರಿಂದ ಅಧಿಕಾರಿಗಳು ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.