ಸವಿತಾ ಸಮಾಜ ಎಸ್ಸಿಗೆ ಸೇರಿಸಿ ಶಿಫಾರಸು

HLK MACHI 19
Published on

ಹೊಳಲ್ಕೆರೆ: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸವಿತಾ ಸಮಾಜವನ್ನು ಎಸ್ಸಿ-ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಗಣಪತಿ ಸಮುದಾಯಭವನದಲ್ಲಿ ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸವಿತಾ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ನಮ್ಮ ಮೂಲ ವೃತ್ತಿಯಾದ ಕ್ಷೌರ, ವೈದ್ಯ, ಸಂಗೀತ, ಕಲಾ ಜ್ಞಾನ ಎಂದೂ ಮರೆಯಬಾರದು. ಇದರಿಂದಲೇ ಜೀವನ ರೂಪಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕಿ ಡಾ. ರೇಖಾ ನರಸಿಂಹ ಮಾತನಾಡಿ, ಪೂರ್ವಜರ ಕಾಲದಿಂದಲೂ ಮೂಲ ವೃತ್ತಿಯಲ್ಲೇ ಜೀವನ ನಡೆಸುತ್ತಿರುವ ಸವಿತಾ ಸಮಾಜ ಯಾವುದೇ ಸ್ಥಾನಮಾನವಿಲ್ಲದೆ ಹಿಂದುಳಿದಿದೆ. ಸಮುದಾಯದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಯಿತು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net