

ಹೂವಿನಹಡಗಲಿ: ವಿದ್ಯಾರ್ಥಿಗಳು ತಮ್ಮ ಏಳಿಗೆ ಕುಂಟಿತಗೊಳಿಸುವ ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿಪಿಐ ಸುಧೀರ್ ಕುಮಾರ್ ಎಂ. ಬೆಂಕಿ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲು ಕುಮಾರೇಶ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಮತ್ತು ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಪೊಲೀಸ್ ಇಲಾಖೆ ವರ್ಷದ 365 ದಿನವೂ ಸಾರ್ವಜನಿಕ ಸೇವೆಗೆ ಲಭ್ಯವಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಇಲಾಖೆಯ 112 ಸಂಖ್ಯೆ ಕರೆ ಮಾಡಿದರೆ ನಮ್ಮ ಸಿಬ್ಬಂದಿ ನಿಮ್ಮ ಸಹಾಯಕ್ಕೆ ಬರುತ್ತಾರೆ. ಇತ್ತೀಚೆಗೆ ಯುವ ಜನರು ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಮೂಲಕ ಪಾಲಕರನ್ನು ಅನಾಥರನ್ನಾಗಿಸುತ್ತಿದ್ದಾರೆ. ರಸ್ತೆ ನಿಯಮ ಪಾಲಿಸಿದರೆ ಈ ರೀತಿಯ ಅನಾಹುತ ತಪ್ಪಿಸಬಹುದು ಎಂದರು.
ಶ್ರಮವಿಲ್ಲದೆ ಸಾಧನೆ ಅಸಾಧ್ಯ. ಶ್ರದ್ಧೆಯಿಂದ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು. ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಗೆ ಅನೇಕ ಕಾಯ್ದೆಗಳಿದ್ದು, ಅವುಗಳ ಬಗ್ಗೆ ತಿಳಿದು ಧೈರ್ಯದಿಂದ ಜೀವನ ನಡೆಸಬೇಕು. ವಿದ್ಯಾರ್ಥಿನಿಯರು ಸಂಕಷ್ಟ ಸಂದರ್ಭದಲ್ಲಿ ನಮ್ಮ ಇಲಾಖೆ ಸೂಚಿಸಿದ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.
ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಮಹಾತ್ಮರ ಜೀವನ ಚರಿತ್ರೆ ಓದಿ ಅವರಂತಾಗಲು ಶ್ರಮಿಸಬೇಕು ಎಂದರು. ಪಿಎಸ್‌ಐ ವಿಜಯಕೃಷ್ಣ, ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಪ್ರಾಚಾರ್ಯ ಎಸ್.ಎಸ್.ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಎಸ್‌ಐ ಬಿ.ರಾಜೇಂದ್ರನಾಯ್ಕ, ಪ್ರಾಧ್ಯಾಪಕರಾದ ಡಾ.ವೈ.ಚಂದ್ರಬಾಬು, ಬಿ.ಮಲ್ಲಿಕಾರ್ಜುನ, ಬಿ.ಪ್ರಕಾಶ ಹಾಗೂ ವಿದ್ಯಾರ್ಥಿಗಳಿದ್ದರು.