

ಕುಷ್ಟಗಿ: ಮಕ್ಕಳಿಗೆ ಹೊಟ್ಟೆ ತುಂಬ ಊಟ ಕೊಡದೆ ಉಪವಾಸ ಕೆಡುವುತ್ತೀರಲ್ಲ.. ನಿಮಗೆಲ್ಲ ಮನುಷ್ಯತ್ವ ಇಲ್ವಾ..? ಮಕ್ಕಳು ದೇವರು ಇದ್ದಂಗೆ. ಅವರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಹುಷಾರ್..! ಇದು ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಅವರು ತಾಲೂಕಿನ ಹೂಲಗೇರಾ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಗುರುನಾಥರನ್ನು ತರಾಟೆಗೆ ತಗೆದುಕೊಂಡ ಪರಿ.
ಬುಧವಾರ ಸಂಜೆ ವಸತಿ ನಿಲಯಕ್ಕೆ ಭೇಟಿ ನೀಡಿದ ನ್ಯಾಯಾಧೀಶರ ಮುಂದೆ ಅಲ್ಲಿನ ಮಕ್ಕಳು ಅಳಲು ತೋಡಿಕೊಂಡರು. ಬೆಳಗಿನ ಉಪಹಾರಕ್ಕೆ ನಿತ್ಯ ಉಪ್ಪಿಟ್ಟು ನೀಡುತ್ತಾರೆ. ಅದೂ ಸಹ ಹೊಟ್ಟೆ ತುಂಬ ಕೊಡುವುದಿಲ್ಲ ಮಧ್ಯಾಹ್ನ ಹುಷಾರಿಲ್ಲದೆ ಮಲಗಿದರೂ ಊಟ ನೀಡುವುದಿಲ್ಲ. ರಜಾ ದಿನಗಳಲ್ಲಿ ಮಾತ್ರ ಮಧ್ಯಾಹ್ನದ ಊಟ ನೀಡಬೇಕೆಂಬ ನಿಯಮವಿದೆ ಎಂದು ಅಡುಗೆ ಸಿಬ್ಬಂದಿ ಗದರಿಸುತ್ತಾರೆ. ಚಳಿಯಲ್ಲೂ ತಣ್ಣೀರು ಸ್ನಾನ ಮಾಡಬೇಕು. ಹಾಸಿಗೆ ಇಲ್ಲ. ಓದುವಾಗ ನೆಲದ ಮೇಲೆಯೇ ಕುಳಿತುಕೊಳ್ಳಬೇಕು. ಶೌಚಗೃಹದ ಫಿಟ್ ತುಂಬಿ ಗಬ್ಬು ನಾರುತ್ತಿದೆ. ಸಮಸ್ಯೆ ಹೇಳಿಕೊಂಡರೆ ಹೊರಗಿನವರಿಂದ ಬೆದರಿಕೆ ಹಾಕಿಸುತ್ತಾರೆ ಎಂದು ದೂರಿದರು.
ಜೈಲಿನಲ್ಲಿಯೂ ಹೊಟ್ಟೆ ತುಂಬ ಊಟ ಕೊಡ್ತಾರೆ. ಸರ್ಕಾರ ಕೊಟ್ಟಿರುವುದನ್ನು ಮಕ್ಕಳಿಗೆ ನೀಡಲು ಏನು ತೊಂದರೆ? ಗುಣಮಟ್ಟದ ಊಟದ ಜತೆಗೆ ಮಕ್ಕಳಿಗೆ ಓದುವ ಪರಿಸರ ನಿರ್ಮಿಸಬೇಕು. ನಿಲಯದ ಆವರಣಕ್ಕೆ ಗೇಟ್ ಅಳವಡಿಸಿ ಹೊರಗಿನವರು ಬರದಂತೆ ನೋಡಿಕೊಳ್ಳಬೇಕು. ಇನ್ನೊಮ್ಮೆ ಭೇಟಿ ನೀಡಿದಾಗ ಎಲ್ಲವೂ ಸರಿ ಇರಬೇಕು. ಮಕ್ಕಳ ಮೇಲೆ ದೌರ್ಜನ್ಯ, ದರ್ಪ ತೋರಿದರೆ ಪೋಕ್ಸೋ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಲಯದ ಸಿಬ್ಬಂದಿಯ ಹಿನ್ನೆಲೆ ತಿಳಿದು ಅವರ ವರ್ತನೆ ಮೇಲೆ ನಿಗಾ ಇಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಪಟ್ಟಣದ ಜೆಎಂಎಫ್‌ಸಿ ಕೋರ್ಟ್ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಇದ್ದರು.
ವಸತಿ ನಿಲಯದಲ್ಲಿ ಮೂರನೇ ವ್ಯಕ್ತಿಗಳು ಬಂದು ಮಕ್ಕಳಿಗೆ ಬದರಿಕೆ ಹಾಕುತ್ತಾರೆ ಎಂಬ ವಿಚಾರ ತಿಳಿದು ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಮಕ್ಕಳಿಗೆ ಊಟ ನೀಡುವಲ್ಲಿ ನಿರ್ಲಕ್ಷ್ಯ ವಹಿಸದಂತೆ ಮೇಲ್ವಿಚಾರಕರಿಗೆ ಸೂಚಿಸಿದ್ದೇನೆ. ಮಕ್ಕಳು ಹೇಳಿಕೊಂಡ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗುವುದು.
ಶಿವಶಂಕರ ಕರಡಕಲ್
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ವಿಸ್ತೀರ್ಣಾಧಿಕಾರಿ, ಕುಷ್ಟಗಿ