

ಎಸಿಎಫ್ ಮನೋಹರ್ ಸಲಹೆ
ಹನೂರು : ಕಾಡಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸುವುದರ ಜತೆಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಇಲಾಖೆಗೆ ಸಹಕಾರ ನೀಡಬೇಕು ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಮನೋಹರ್ ಸ್ವಪ್ನಿಲ್ ಆಹಿರೆ ತಿಳಿಸಿದರು. ಪಟ್ಟಣದ ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅರಣ್ಯ ಹಾಗೂ ವನ್ಯಜೀವಿಗಳು ನಮ್ಮೆಲ್ಲರ ಸಂಪತ್ತು. ಇದರ ಸಂರಕ್ಷಣೆಯಲ್ಲಿ ಗಿರಿಜನರ ಪಾತ್ರ ಅಪಾರ. ಅರಣ್ಯ ಹಾಗೂ ಗಿರಿಜನರ ನಡುವೆ ಅನನ್ಯ ಸಂಬಂಧವಿದೆ. ಆದರೆ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಬೀಳುವುದು ಹೆಚ್ಚಾಗಿದೆ. ಇದರಿಂದ ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ನಿಗಾ ವಹಿಸಬೇಕು. ಬೆಂಕಿ ಬೀಳದಂತೆ ಅಗತ್ಯ ಕಾಳಜಿ ವಹಿಸಬೇಕು. ಈ ಬಗ್ಗೆ ಸ್ಥಳೀಯವಾಗಿ ಜನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಂಘದ ನೂತನ ಉಪಾಧ್ಯಕ್ಷ ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಆರ್‌ಎಫ್‌ಒ ಪ್ರವೀಣ್, ಸಂಘದ ಕಾರ್ಯದರ್ಶಿ ದೊಡ್ಡವೀರಶೆಟ್ಟಿ, ನಿರ್ದೇಶಕರಾದ ಸಿದ್ದೇಗೌಡ, ಮಾದೇಗೌಡ, ಮಹದೇವ, ಚಂದ್ರಮ್ಮ ಇತರರು ಇದ್ದರು.