

ಕೆ.ಆರ್.ನಗರ : ಸಾಧಕರನ್ನು ಗೌರವಿಸಿದರೆ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆಗಳು ದೊರಕುತ್ತವೆ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು. ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ನೌಕರರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಜಾತಿ ಮತ್ತು ಸಮುದಾಯದ ಹೆಸರಿನ ಸಂಘ, ಸಂಸ್ಥೆಗಳು ಪರಸ್ಪರ ಸಹಕಾರ ಮನೋಭಾವನೆಯಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಸೌಹಾರ್ದ ಮೂಡಿಸಬೇಕು. ಗುರು- ಹಿರಿಯರ ಮಾರ್ಗದರ್ಶನ ಪಡೆದು ಇತರರಿಗೆ ಮಾದರಿಯಾಗುವಂತೆ ಸಂಘಟನೆ ನಿರ್ವಹಿಸಬೇಕು. ಭಿನ್ನವಾಗಿ ನಿಂತು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು. ಸಮಾಜಮುಖಿ ಕೆಲಸ ಮಾಡುವ ಯಾವುದೇ ಸಂಘ- ಸಂಸ್ಥೆಗಳನ್ನು ಜಾತ್ಯತೀತವಾಗಿ ಪ್ರೋತ್ಸಾಹಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿದರೆ ಅವರು ನಾಡಿಗೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಶೇಷ ಬೋಧನೆ, ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲು ಅವರು ಸಲಹೆ ನೀಡಿದರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.
ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ, ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ. ಮಂಜುನಾಥ, ಮುಖಂಡರಾದ ಉಮಾಶಂಕರ, ರಾಜಶೇಖರ ಮಾತನಾಡಿದರು. ಸಮುದಾಯದ ನಿವೃತ್ತ ನೌಕರರು ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಂಘದ ಪದಾಧಿಕಾರಿಗಳಾದ ಕೆ.ಎಂ.ಹೇಮೇಶ, ಕೆ.ಬಿ.ಚಂದ್ರಶೇಖರ, ಗಂಗಾಧರ, ಎಸ್. ಹರೀಶ ಇತರರು ಇದ್ದರು.