ಶಾಲಾ ಹಂತದಲ್ಲೇ ಭಾಷೆಯನ್ನು ಕಲಿಯಬೇಕು

12mlk1
Published on

ಮೇಲುಕೋಟೆ : ಮಕ್ಕಳು ಕಿರಿಯ ಪ್ರಾಥಮಿಕ ಶಾಲಾ ಹಂತದಲ್ಲೇ ಭಾಷೆಯನ್ನು ಕಲಿಯಬೇಕು ಎಂದು ಸಾಹಿತಿ ಪ್ರೊ. ಚಂದ್ರಶೇಖರ್ ಸಲಹೆ ನೀಡಿದರು. ಮೇಲುಕೋಟೆ ಹೋಬಳಿಯ ನ್ಯಾಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಶಾಲಾ ಹಂತದಲ್ಲೇ ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆ ಕಲಿಸಬೇಕು. ಇದು ಶಾಲೆಯ ಪ್ರಗತಿಯನ್ನು ಬಿಂಬಿಸುತ್ತದೆ ಎಂದರು. ಈ ನಿಟ್ಟಿನಲ್ಲಿ ನ್ಯಾಮನಹಳ್ಳಿ ಶಾಲೆ ಮಾದರಿಯಾಗಿದೆ. ಹಾಗಾಗಿಯೇ ಬೇರೆ ಗ್ರಾಮಗಳಿಂದಲೂ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಪಾಲಕರು ಮತ್ತು ಶಿಕ್ಷಕರು ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂದು ತಿಳಿಸಿದರು. ಈ ಶಾಲೆಯನ್ನು ಕಲಿಕಾ ಆಕರ್ಷಕವಾಗಿಸಲು ಶಿಕ್ಷಕಿ ಪೂರ್ಣಿಮಾ ಶ್ರಮಿಸುತ್ತಿದ್ದಾರೆ. ಕ್ರಿಯಾಶೀಲ ಶಿಕ್ಷಕರಿಂದ ಶಾಲೆ ಅರ್ಥಪೂರ್ಣವಾಗಿ ರೂಪುಗೊಂಡಿದೆ ಎಂದು ಪ್ರೊ. ಚಂದ್ರಶೇಖರ್ ಹೇಳಿದರು.
ಕಲಿಕಾ ಚಟುವಟಿಕೆ ಮುಖ್ಯ: ನಿವೃತ್ತ ಶಿಕ್ಷಕ ವೆಂಕಟ ರಾಮೇಗೌಡ ಮಾತನಾಡಿ, ಇಂದಿನ ಸ್ಪರ್ಧಾತ್ಮ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಶೇ.100ರಷ್ಟು ಕಲಿಕೆ ಸಾಧ್ಯ ಎಂದರು.
ಇದೇ ಸಂದರ್ಭ ಕ್ಯಾತನಹಳ್ಳಿಯ ಡಾ.ಕೆ.ವೈ. ಶ್ರೀನಿವಾಸ್ ಅವರು ಶಾಲೆಗೆ ಪ್ರಿಂಟರ್ ಖರೀದಿಸಲು ಹತ್ತು ಸಾವಿರ ನಗದು ನೀಡಿದರು. ವಿಜಯ ಕಾಲೇಜು ಕನ್ನಡ ಉಪನ್ಯಾಸಕಿ ನ್ಯಾಮನಹಳ್ಳಿ ಲೀಲಾ ರವಿ ಗ್ರಂಥಾಲಯ ಪುಸ್ತಕಗಳ ಖರೀದಿಗಾಗಿ 6, 500ರೂ. ಚೆಕ್ ಹಸ್ತಾಂತರಿಸಿದರು. ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರನ್ನು ಅಭಿನಂದಿಸಲಾಯಿತು.
ಮುಖ್ಯಶಿಕ್ಷಕ ಸಂತಾನರಾಮನ್, ಸಾಮಾಜಿಕ ಹೋರಾಟಗಾರ ಈಶಮುರಳಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಿಲ್‌ಕುಮಾರ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net