ನಾಗಮಂಗಲದ ಘಟನೆ ಸಮಸ್ತ ಹಿಂದುಗಳಿಗೆ ಪಾಠ

21 NMG 01 (8)
ನಾಗಮಂಗಲದ ಡಾ.ಅಂಬೇಡ್ಕರ್ ಭವನದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ನಾಗಮಂಗಲ ಗಲಭೆ ಪ್ರಕರಣದಲ್ಲಿ ಹಿಂದುಗಳಿಗೆ ಜಾಮೀನು ಕೊಡಿಸಿದ್ದ ವಕೀಲರನ್ನು ಸನ್ಮಾನಿಸಲಾಯಿತು.
Published on

ನಾಗಮಂಗಲ: ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಧರ್ಮದ ಧ್ವಜ ಹಾಕುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ ಎಂದು ಯಾವ ಕಾನೂನಿನಲ್ಲಿಯೂ ಇಲ್ಲವಾಗಿದೆ. ಹಿಂದುಗಳ ಮೇಲೆ ಹಾಗೂ ಹಬ್ಬಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವರಿಗೆ ಸೂಕ್ತ ಉತ್ತರ ಕೊಟ್ಟಿರುವ ನಾಗಮಂಗಲದ ಘಟನೆ ಸಮಸ್ತ ಹಿಂದುಗಳಿಗೆ ಪಾಠವಾಗಬೇಕಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್‌ಪಂಪ್‌ವೆಲ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ನಾಗಮಂಗಲ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದವರಿಗೆ ಉಚಿತವಾಗಿ ಜಾಮೀನು ಕೊಡಿಸಿದ್ದ ವಕೀಲರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೆ.10 ರಂದು ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಉಂಟಾದ ಗಲಭೆ ದೇಶಾದ್ಯಂತ ಸುದ್ದಿಯಾಗಿದೆ. ಈ ಘಟನೆಯಲ್ಲಿ ಇಸ್ಲಾಮಿಕ್, ಜಿಹಾದಿ ಶಕ್ತಿಗಳು ನಮ್ಮ ಕಾರ್ಯಕ್ರಮಕ್ಕೆ ತೊಂದರೆ ಕೊಟ್ಟದ್ದು ಮಾತ್ರವಲ್ಲದೆ ಹಿಂದುಗಳ ಅಂಗಡಿಗಳು, ಮನೆಗಳು, ವಾಹನಗಳ ಮೇಲೆ ಬೆಂಕಿ ಹಚ್ಚಿವೆ. ಇಂತಹ ದೌರ್ಜನ್ಯದ ವಿರುದ್ಧ ಹಿಂದು ಕಾರ್ಯಕರ್ತರು ಹೋರಾಟ ಮಾಡಿ 16 ದಿನ ಜೈಲಿನಲ್ಲಿದ್ದರು. ಇಂತಹ ಹಿಂದು ಯುವಕರ ಜತೆ ನಾವಿರಬೇಕು ಎಂದು ವಕೀಲರು ಕೈಜೋಡಿಸಿ ಸಹಾಯ ಮಾಡಿದ್ದಾರೆ. ದೇಶ, ಧರ್ಮ, ಹಿಂದುತ್ವಕ್ಕೆ ಹೋರಾಟ ಮಾಡುವವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಪಂಚದಲ್ಲಿ ಯಾವುದೇ ಮಸೀದಿ, ಚರ್ಚ್‌ಗಳ ಮೇಲೆ ಕಲ್ಲು ತೂರಿರುವ ಘಟನೆ ಎಲ್ಲೂ ನಡೆದಿಲ್ಲ. ಆದರೆ ಹಿಂದುಗಳ ಮೇಲೆ ಯಾಕೆ ಪದೇ ಪದೆ ಇಂತಹ ದಬ್ಬಾಳಿಕೆಗಳು ಮರುಕಳಿಸುತ್ತಿವೆ ಎಂಬುದನ್ನು ಯೋಚಿಸಬೇಕಿದೆ ಎಂದರು.

ಇಂತಹ ಘಟನೆಗಳಿಗೆ ಮತ್ತೆ ನಾವು ಅವಕಾಶ ಕೊಡಬಾರದು. ಅದಕ್ಕೆ ನಾವು ತಯಾರಾಗಬೇಕಿದೆ. ನಮ್ಮ ಕರಾವಳಿ ಭಾಗದಲ್ಲಿ ಕಾರ್ಯಕ್ರಮಕ್ಕೆ ತೊಂದರೆ ಕೊಡದಂತೆ ಉತ್ತರ ಕೊಟ್ಟಿದ್ದೇವೆ. ಒಬ್ಬ ಕಾರ್ಯಕರ್ತನ ಬಲಿದಾನವು ವ್ಯರ್ಥವಾಗದಂತೆ ಉತ್ತರ ಕೊಟ್ಟಿದ್ದೇವೆ. ಹೋರಾಟ, ತ್ಯಾಗ ಮಾಡಿದ ನೆಲ ನಾಗಮಂಗಲವಾಗಿದೆ. ಹಿಂದುತ್ವದ ಶಕ್ತಿಗೆ ನಾಗಮಂಗಲದಲ್ಲಿ ಯಾವುದೇ ಕೊರತೆಯಿಲ್ಲ. ಆದರೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಅಷ್ಟೆ. ನಾಗಮಂಗಲದ ಘಟನೆಯಿಂದ ರಾಜ್ಯದ ಹಿಂದು ಯುವಕರು ಎಚ್ಚೆತ್ತುಕೊಂಡಿದ್ದಾರೆ. ದಾವಣಗೆರೆಯಲ್ಲಿಯೂ ಇದೇ ರೀತಿ ನಡೆಯುವ ಸಂದರ್ಭ ಸೂಕ್ತ ಉತ್ತರ ನೀಡಿದ್ದಾರೆ. ನಾವು ಯಾರ ತಂಟೆಗೂ ಹೋಗಲ್ಲ, ನಮ್ಮ ಕಾರ್ಯಕ್ರಮಕ್ಕೆ ತೊಂದರೆ ಕೊಡಬೇಡಿ. ನಮಗೆ ತೊಂದರೆ ಕೊಟ್ಟರೆ ಅದೇ ರೀತಿ ಉತ್ತರ ಕೊಡುತ್ತೇವೆ. ಅವರು ಕಲ್ಲಿನಿಂದ ತೊಂದರೆ ಕೊಟ್ಟರೆ, ಅದೇ ರೀತಿ ಉತ್ತರ ಕೊಡುತ್ತೇವೆ ಎಂದರು.

ವಕೀಲ ಎಂ.ಜೆ.ಜೈನ್ ಮಾತನಾಡಿದರು. ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಅಜಿತ್‌ಜೈನ್, ಪದಾಧಿಕಾರಿಗಳಾದ ಮಂಜುನಾಥ್, ಬಸವರಾಜು, ಪುನೀತ್, ಮಹೇಶ್, ಚೇತನ್, ಪ್ರಭುಸ್ವಾಮಿ, ಉಮೇಶ್‌ಚಂದ್ರ, ಎಂ.ಇ.ಹರ್ಷ, ಯಶ್ವಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net