

ಶಿರಸಿ: ಭಾರತೀಯ ಸೇನೆಗೆ ಆಯ್ಕೆಯಾದ ಯೋಧ ಸುದೀಪ ಶೇಖಪ್ಪ ಗೌಡಾ (ಸ್ಪೆಷಲ್ ಪ್ಯಾರಾ ಪೊರ್ಸ) ಅವರನ್ನು ತವರೂರಾದ ಅಂಡಗಿಯಲ್ಲಿ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.
ಭಾರತ ದೇಶದ ಗಡಿ ಕಾಯುತ್ತ ಭಾರತೀಯರ ರಕ್ಷಣೆಗಾಗಿ ಹೊರಟಿರುವ ಯೋಧನನ್ನು ಶ್ರೀ ಮಾರುತಿ ದೇವಸ್ಥಾನದ ಕಮಿಟಿ ಮತ್ತು ಊರ ಗ್ರಾಮಸ್ಥರು ಶಾಲಾ ಆವರಣದಿಂದ ಶ್ರೀ ಮಾರುತಿ ದೇವಸ್ಥಾನದವರೆಗೆ ಶಾಲಾ ಮಕ್ಕಳ ಅದ್ದೂರಿ ಮೆರವಣಿಗೆಯೊಂದಿಗೆ ಕರೆತರಲಾಯಿತು.
ಸುದೀಪ್ ಶೇಖಪ್ಪ ಗೌಡ ಇವರು ಕೃಷಿ ಕುಟುಂಬದಲ್ಲಿ ಜನಿಸಿದ ಯುವಕ. ಬಡತನದಲ್ಲಿ ಕೂಡ ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಓದಿ ಮುಂದೆ ಸೇನೆಗೆ ಸೇರಬೇಕೆಂಬ ಕನಸು ಹೊತ್ತಿದ್ದರು. ಈಗ ಒಂದು ವರ್ಷದ ಕಠಿಣವಾದ ತರಬೇತಿಯನ್ನು ಮುಗಿಸಿ ಹುಟ್ಟುರಾದ ಅಂಡಗಿಗೆ ಬಂದಿದ್ದರಿಂದ ಅವರಿಗೆ ಶ್ರೀ ಮಾರುತಿ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಮಾಲತೇಶ್ ಲಕ್ಷ್ಮಣ್ ನಾಯಕ್ ಹಾಗೂ ಉಳಿದ ಸದಸ್ಯರು ಶಾಲುಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದೀಪ್ ಗೌಡ ವಿದ್ಯಾರ್ಥಿ ದೆಸೆಯಲ್ಲಿ ನಾನು ಕೂಡ ತುಂಬಾ ಕಷ್ಟಪಟ್ಟು ಓದಿದ್ದೇನೆ ಹಾಗೂ ಸೇನೆಗೆ ಸೇರಲೇಬೇಕು ಎಂಬ ಮಹಾದಾಸೆಯಿಂದ ನಾಲ್ಕಾರು ಬಾರಿ ನಾನು ಪ್ರಯತ್ನದಲ್ಲಿ ಸೋತರು ಛಲ ಬಿಡದೆ ಪ್ರಯತ್ನಿಸಿ ಮತ್ತೆ ಸೇನೆಗೆ ಸೇರಿದ್ದೇನೆ. ನೀವು ಕೂಡ ಮುಂದೆ ಗುರಿ ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದೆಂದು ಅಲ್ಲಿ ಸೇರಿದ್ದ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ಗ್ರಂಥಾಲಯ ಮೇಲ್ವಿಚಾರಕರಾದ ಚಂದ್ರ ಗದ್ದೆಮನಿ ಇತರರಿದ್ದರು.