

ಹುಬ್ಬಳ್ಳಿ : ಲೋಕ ಅದಾಲತ್ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ ಹಿರಿಮೆಯನ್ನು ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಹಾಗೂ ಮೋಹನ ಪೋಳ ಅವರು ಹೊಂದಿದ್ದರು. ಈಗ ಅವರು ಪದೋನ್ನತಿ ಹೊಂದಿ, ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಿದ್ದಾರೆ. ಈ ಇಬ್ಬರು ನ್ಯಾಯಾಧೀಶರುಗಳ ಕಾರ್ಯ ನಿರ್ವಹಣೆಯು ಶ್ಲಾಘನೀಯವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.
ಇಲ್ಲಿನ ಹೊಸ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ ವಕೀಲರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ವರ್ಗಾವಣೆಗೊಂಡ ನ್ಯಾಯಾಧೀಶರ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಅವರ ಹೆಸರಿನಲ್ಲಿಯೇ ‘ರಾಜಿ‘ ಇದೆ. ಯಶಸ್ವಿಯಾಗಿ ಹಲವಾರು ಕ್ಲಿಷ್ಟಕರ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದರು. ಹಲವು ಕಷ್ಟಕರ ಪ್ರಕರಣಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ ಮಾತನಾಡಿ, ಲೋಕ ಅದಾಲತ್ನಲ್ಲಿ ಸಾಕಷ್ಟು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ, ತಾಲೂಕು ನ್ಯಾಯಾಲಯಕ್ಕೆ ಒಳ್ಳೆಯ ಹೆಸರು ತಂದುಕೊಟ್ಟ ಕೀರ್ತಿ ಈ ಇಬ್ಬರು ನ್ಯಾಯಾಧೀಶರಿಗೆ ಸಲ್ಲುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ, ಹುಬ್ಬಳ್ಳಿ ನ್ಯಾಯಾಲಯವು ಕೋವಿಡ್ ಹಾಗೂ ಜಿಎಸ್ಟಿ ಹೆಚ್ಚಳ ಕಾಲಾವಧಿಯಲ್ಲಿ ಕಷ್ಟಕರ ಪ್ರಕರಣಗಳನ್ನು ಎದುರಿಸಿದೆ. ಹಳೇ ಹುಬ್ಬಳ್ಳಿ ಗಲಭೆ, ಈದ್ಗಾ ಮೈದಾನ ಸೇರಿ ಇತರ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಎಲ್ಲ ವಕೀಲರು ಹಾಗೂ ನ್ಯಾಯಾಧೀಶರು ಉತ್ತಮ ಸಹಕಾರ ನೀಡಿದ್ದರು ಎಂದು ಹೇಳಿದರು.
3 ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಸದಾಶಿವ ಪೋಳ ಮಾತನಾಡಿ, ಹುಬ್ಬಳ್ಳಿ ವಕೀಲರ ಸಂಘವು ಮಾದರಿ ವಕೀಲರ ಸಂಘವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಗಲಕೋಟೆ ನ್ಯಾಯಾಲಯಕ್ಕೆ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ರಾಜಶೇಖರ ತಿಳಗಂಜಿ ಹಾಗೂ ಬೆಂಗಳೂರು ನ್ಯಾಯಾಲಯಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಮೋಹನ ಸದಾಶಿವ ಪೋಳ ಅವರು ಪದೋನ್ನತಿ ಹೊಂದಿ, ವರ್ಗಾವಣೆ ಆಗಿರುವುದರಿಂದ ಅವರನ್ನು ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಡಿ.ಆರಿ, 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಣ್ಣ ಬಿ. ಹಂದ್ರಾಳ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತ ಶಿಗ್ಗಾಂವ, ಕೋಶಾಧ್ಯಕ್ಷ ಶ್ರೀಕಾಂತ ಗುಳೇದ, ಜಂಟಿ ಕಾರ್ಯದರ್ಶಿ ಜಿ.ಡಿ. ಜಂತ್ಲಿ, ವಕೀಲರ ಸಂಘದ ಸದಸ್ಯರು, ಪದಾಧಿಕಾರಿಗಳು, ವಕೀಲರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಅಶೋಕ ಅಕ್ಕಿ ಸ್ವಾಗತಿಸಿದರು. ವಿ.ಎಸ್. ಹಳೇಮನಿ ವಂದಿಸಿದರು.