

ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶನಿವಾರ ವಿವಿ ಸೆಂಟ್ರಲ್ ಕ್ಯಾಂಪಸ್ನ ಮುಖ್ಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾರ್ವಜನಿಕ ಆಡಳಿತದಲ್ಲಿ ವಿಶಿಷ್ಟ ಸೇವೆಯ ಮೂಲಕ ಸಮಾಜದ ಉನ್ನತ ಸ್ಥಾನವನ್ನು ತಲುಪಿರುವ 8 ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಸರ್ಕಾರದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯಸಭಾ ಸದಸ್ಯೆ ಹಾಗೂ ಇನ್ೆಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ಶಾಸಕರಾದ ದರ್ಶನ್ ಧ್ರುವನಾರಾಯಣ್, ಸಂಸದರಾದ ಮಲ್ಲೇಶಬಾಬು, ಈಶ್ವರ ಖಂಡ್ರೆ, ಕೇರಳದ ಮುಖಂಡ ಚಾಂಡಿ ಉಮ್ಮನ್ರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ, ಕ್ರೈಸ್ಟ್ ವಿಶ್ವವಿದ್ಯಾಲಯವು ತಮ್ಮ ಜೀವನದ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿದರು. ಕ್ರೈಸ್ಟ್ ವಿವಿಯಿಂದ ರೂಪುಗೊಳ್ಳುವ ನಾಯಕರಲ್ಲಿ ಗುಣಮಟ್ಟದ ಚಿಂತನೆಗಳು ಮೈದಳೆಯುತ್ತವೆ ಎಂದು ಹೇಳಿದರು.
ಕ್ರೈಸ್ಟ್ ವಿವಿ ಮಾಜಿ ಅಧ್ಯಾಪಕಿ ಸುಧಾಮೂರ್ತಿ ಮಾತನಾಡಿ, ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿರುವ ಬೋಧನೆಯ ಮೇಲಿನ ಪ್ರೀತಿ ಮತ್ತು ಉತ್ಸಾಹ ತಮ್ಮಜೀವನವನ್ನು ಅರ್ಥಪೂರ್ಣವಾಗಿ ಸಮೃದ್ಧಗೊಳಿಸಿದೆ ಎಂದು ಹೇಳಿದರು.
ಸಂಸದ ಮಲ್ಲೇಶ್ ಬಾಬು ತಮ್ಮ ವೃತ್ತಿಜೀವನವು ವ್ಯವಹಾರದಿಂದ ರಾಜಕೀಯಕ್ಕೆ ಬದಲಾದಾಗ ಎದುರಿಸಿದ ಸವಾಲುಗಳನ್ನು ಮೆಲಕು ಹಾಕಿದರು. ಕಾಲೇಜು ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾಗ 3 ದಿನ ಅಮಾನತುಗೊಂಡಿದ್ದನ್ನು ನೆನಪಿಸಿಕೊಂಡರು.