

ವಿರಾಜಪೇಟೆ: ಆರ್ಜಿ ಗ್ರಾಮದಲ್ಲಿ ಸುದೀರ್ಘ ಹೋರಾಟದ ಫಲವಾಗಿ ಗೋಮಾಳ ಸಿಕ್ಕಿದೆ. ಆದರೆ ಗೋವುಗಳನ್ನು ಉಳಿಸಲು ಗೋ ಸಂರಕ್ಷಣೆಯೂ ಅಗತ್ಯವಾಗಿದೆ. ಸುದೀರ್ಘ ಕಾನೂನು ಹೋರಾಟದ ಬಳಿಕ ನಮಗೆ ಆರ್ಜಿ ಗ್ರಾಮದಲ್ಲಿ ಗೋಮಾಳ ಸಿಕ್ಕಿದೆ. ಆದರೆ ಮುಂದೆ ಗೋವುಗಳನ್ನು ಉಳಿಸಲು ನಾವು ಗೋ ಸಂರಕ್ಷಣೆ ಮಾಡಬೇಕಿದೆ ಎಂದು ಜಿಲ್ಲಾ ಸ್ವಯಂ ಸೇವಕ ಸಂಘ ಸಂಚಾಲಕ ಚಕ್ಕೇರ ಮನು ಹೇಳಿದರು.
ವಿರಾಜಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಆರ್ಜಿ ಗೋಮಾಳ ಸಂರಕ್ಷಣೆಯ ಹೋರಾಟದಲ್ಲಿ 42 ವರ್ಷಗಳವರೆಗೆ ನಿರಂತರ ಕಾನೂನು ಹೋರಾಟ ನಡೆಸಿ ಜಯ ಸಾಧಿಸಿದ ರಾಮಯ್ಯ, ದಿ.ಪುರುಷೋತ್ತಮ ಮತ್ತು ದಿ.ಕೀತಿಯಂಡ ಸುಬ್ಬಯ್ಯ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂರು ಜನ ಸರಿಸುಮಾರು 42 ವರ್ಷ ಗೋಮಾಳ ಉಳಿಸಲು ಕಾನೂನು ಹೋರಾಟ ನಡೆಸಿದರು. ಇದರಲ್ಲಿ ಇಬ್ಬರು ದಿವಂಗತರಾದರೂ ರಾಮಯ್ಯ ಹೋರಾಟ ಮುಂದುವರಿಸಿ ಯಶ ಸಾಧಿಸಿದರು. ಈ ನಡುವೆ ನಮ್ಮ ಸಂಘ ಸಹ ಇವರಿಗೆ ಬೆಂಬಲ ನೀಡುತ್ತಾ ಬಂದಿತ್ತು. ನ್ಯಾಯಾಲಯ 47.47 ಎಕರೆ ಜಾಗ ಅಂತಿಮವಾಗಿ ಗೋಮಾಳ ಎಂದಿತ್ತು. ಆದರೆ ಅಧಿಕಾರಿಗಳು 15 ಎಕರೆ ಜಾಗ ನೀಡಿದಾಗ ಅದಕ್ಕೆ ನಾವು ಬೇಲಿ ಹಾಕಿದೆವು. ಆಗ ನಮ್ಮಲ್ಲಿನ ಕೆಲವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಯಿತು. ಏನೇ ಆದರೂ ಜಯ ಸಂದಿದೆ. ಗೋವುಗಳ ಇರುವು ಇಲ್ಲವಾದರೆ ಧರೆ ಉಳಿಯುದಿಲ್ಲ. ಭೂಮಿಯ ಪ್ರಥಮ ಜೀವಿಯೇ ಗೋವು ಆಗಿದೆ. ಆದರೆ ಇಂದು ಅವನ್ನು ಸಾಕದೆ ಕಸಾಯಿಖಾನೆಗೆ ನೀಡುತ್ತಿದ್ದೇವೆ. ಇದಕ್ಕೆ ನಮ್ಮ ಮನಸ್ಥಿತಿ ಕಾರಣ. ಆದರೆ ಅವುಗಳ ಸಾಮಿಪ್ಯ ರೋಗ ನಿರೋಧಕವಾಗಿದ್ದು ಗೋಮೂತ್ರ ಆರೋಗ್ಯಕ್ಕೆ ಸಹಕಾರಿ ಮತ್ತು ಕೃಷಿಗೂ ಗೊಬ್ಬರ ಅನುಕೂಲ ಎಂದರು.
ಜಿಲ್ಲಾ ಸ್ವಯಂ ಸೇವಕ ಸಂಘ ವಿಭಾಗ ಸಹ ಸಂರ್ಪಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿ, ಸುಮಾರು 81 ಎಕರೆ ಗೋಮಾಳಕ್ಕಾಗಿ ಕಾನೂನು ಹೋರಾಟ ನಡೆಯಿತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಪ್ರಭಾವಿಗಳ ಒತ್ತಡದಿಂದ ಸಮಸ್ಯೆಗಳು ಎದುರಾಯಿತು. ಇದರಿಂದ ಸುದೀರ್ಘ ಕಾನೂನು ಹೊರಾಟ ನಡಯಿತು. ಇದರಲ್ಲಿ ಮೂವರ ಪರಿಶ್ರಮ ಅವಿರತವಾಗಿದೆ. ಜತೆಗೆ ಗೋಮಾಳವನ್ನು ಅಧಿಕಾರಿಗಳೂ ಸಿಕ್ಕಿದಾಗಲೆಲ್ಲ ಮಂಜೂರು ಮಾಡುತ್ತಾ ಬಂದರು. ಅದರ ಫಲವಾಗಿ ಸುಮಾರು 47.47 ಎಕರೆ ಮಾತ್ರ ಇಂದು ಸಿಕ್ಕಿದೆ. ಮೂವರ ಜತೆಗೆ ತಾಲೂಕು ಕಚೇರಿ ಮುಂದೆ ಸಹ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಜಾಗಕ್ಕೆ ಶ್ರಮದಾನದ ಮೂಲಕ ಬೇಲಿ ಹಾಕಿದ್ದೇವೆ. ನ್ಯಾಯಾಲಯ ಅಂತಿಮ ಆದೇಶ ನೀಡಿದರೂ ಅಧಿಕಾರಿಗಳ ಅಸಹಾಕಾರ ಕಾರಣ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಯಿತು. ಹೀಗಾಗಿ ವಿಳಂಬವಾಯಿತು. ಆದರೆ ಇತ್ತಿಚೆಗೆ ಇದರ ಸರ್ವೇ ಆಗಿರುವುದು ಪ್ರಮುಖ ವಿಚಾರವಾಗಿದೆ ಎಂದರು.
ಕಾನೂನು ಹೋರಾಟ ನಡೆಸಿದ ಅರ್ಜಿಯ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ದಿ.ಸುಬ್ಬಯ್ಯ ಅವರ ಮಗ ಅರುಣ ಮತ್ತು ದಿ.ಪುರುಷೋತ್ತಮ ಅವರ ಮಗ ಜೀವನ್ ಸನ್ಮಾನ ಸ್ವೀಕರಿಸಿದರು.
ವಿಶ್ವ ಹಿಂದು ಪರಿಷತ್ ನಿಕಟಪೂರ್ವ ಸಂಚಾಲಕರಾದ ಟಾಟಬೋಪಯ್ಯ, ಹಿರಿಯ ಹಾಗೂ ಸ್ವಯಂಸೇವಕ ಸಂಘದ ಪ್ರಮುಖರಾದ ಚಂದ್ರು ಮತ್ತು ಮಚ್ಚಾರಂಡ ಮಣಿ ಮಾತನಾಡಿದರು. ಸಮಾರಂಭದಲ್ಲಿ ವಿರಾಜಪೇಟೆ ತಾಲೂಕು ಸಂಘ ಸಂಚಾಲಕ ಅಶ್ಚಿನಿ, ಬಿಜೆಪಿಯ ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ, ಹಿರಿಯರಾದ ನೆಲ್ಲಮಕ್ಕಡ ಶಂಭು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ರಾಮಯ್ಯ ತಮ್ಮ ಅನುಭವನ್ನು ಹಂಚಿಕೊಂಡರು.