ಹಿಗ್ಗದೆ ಸಾಧನೆಯತ್ತ ಗಮನಹರಿಸಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

Honoring talented students Mandya
Published on

ಮಂಡ್ಯ: ಪ್ರತಿಭಾವಂತರು ಬೆಟ್ಟದ ತುದಿಯಲ್ಲಿರುವ ಕಲ್ಲಾಗಬಾರದು. ಅದೇ ರೀತಿ ಹೆಚ್ಚು ಅಂಕ ಪಡೆದಿದ್ದೇನೆಂದು ಹಿಗ್ಗದೆ ಮುಂದಿನ ಸಾಧನೆಯತ್ತ ಗಮನಹರಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ಗುರಿ ಇಟ್ಟುಕೊಳ್ಳದೇ ಹೋದರೆ ಏನನ್ನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಅಪ್ರತಿಮ ಸಾಧನೆ ಮಾಡಿರುವುದರಿಂದಲೇ ನಿಮ್ಮ ಮುಂದಿವ ಭವಿಷ್ಯ ಉಜ್ವಲವಾಗಲಿ ಎಂದು ಶಾಸಕ ರವಿಕುಮಾರ್ ಗಣಿಗ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ್ದಾರೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಅಪ್ರತಿಮ ಪ್ರತಿಭೆ ಹೊಂದಿದ್ದು, ನಿಮಗೆ ನೀವೇ ಜವಾಬ್ದಾರರು, ನೀವೇ ಬೆಳಕು. ನೀವು ಎಲ್ಲೇ ಹೋದರೂ ಬೆಳಕಿನೆಡೆಗೆ ನಡೆಯಬೇಕು. ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಉದ್ಧೇಶ ಆ ವ್ಯಕ್ತಿ ಸಮಾಜದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎನ್ನುವುದಾಗಿದೆ. ಜೀವನದಲ್ಲಿ ಸಾಧನೆ ಮಾಡದೇ ಹೋದರೆ ಆ ಜೀವನವೇ ವ್ಯರ್ಥ. ಹಾಗಾಗಿ ಪ್ರತಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುಷ್ಟಕ್ಕೇ ಸೀಮಿತವಾಗದೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಸಾಧನೆ ಮಾಡಬೇಕೆಂದು ತಿಳಿ ಹೇಳಿದರು.

ಹಗಲು ರಾತ್ರಿ ಶ್ರಮ ಹಾಗೂ ಕಷ್ಟಪಟ್ಟು ಉತ್ತಮ ಅಂಕ ಪಡೆದು ಪ್ರತಿಭಾವಂತರಾಗಿ, ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಿದ್ದೀರಿ. ಇದು ಇತರರಿಗೆ ಪ್ರೇರಣೆಯಾಗಲಿ. ನೀವು ಪಾಲಕರಿಗೆ ಮಾತ್ರ ಸೀಮಿತರಾಗದೆ, ದೇಶದ ಆಸ್ತಿಯಾಗಬೇಕು. ಫಲವತ್ತಾದ ಮಣ್ಣಿಗೆ ಬೀಜ ಬಿತ್ತನೆ ಮಾಡಿದರೆ ಸಾಲದು. ಅದಕ್ಕೆ ಪೌಷ್ಠಿಕ ಆಹಾರ ಹಾಕಿದರೆ ಮಾತ್ರ ಬೆಳೆದು ಉತ್ತಮ ಫಸಲು ಕೊಡಲು ಸಾಧ್ಯ. ಅದೇ ರೀತಿ ಹಲವು ಮಕ್ಕಳ ಪರಿಸ್ಥಿತಿ ಆಗಿದೆ. ಯಾರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಮೌಲ್ಯಗಳನ್ನು ಕಲಿಸುತ್ತಾರೋ ಅಂತಹವರು ಸಮಾಜದಲ್ಲಿ ಉತ್ತುಂಗಕ್ಕೇರಲು ಸಾಧ್ಯ. ಇದನ್ನು ಎಲ್ಲ ಪಾಲಕರು ಹಾಗೂ ಮಕ್ಕಳು ಅರಿಯಬೇಕೆಂದರು.

ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ಬದುಕಿನಲ್ಲಿ ಸಾಧನೆ, ಯಶಸ್ಸು ಗಳಿಸುವುದು ಎಷ್ಟು ಮುಖ್ಯವೋ ಗಳಿಸಿದ ಯಶಸ್ಸನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಎಸ್‌ಎಸ್‌ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉನ್ನತ ಅಂಕಗಳಿಸಿದ ಹಾಗೆಯೇ ಶಿಕ್ಷಣದ ಪ್ರತಿ ಹಂತದಲ್ಲಿಯೂ ಉನ್ನತ ಅಂಕಗಳಿಸಬೇಕು. ಜ್ಞಾನ ಹರಿಯುವ ನೀರಿನಂತೆ ವಿಶಾಲವಾದದ್ದು. ಶಿಕ್ಷಣವೂ ನಿಂತ ನೀರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಳೆದ ಬಾರಿ ಜಿಲ್ಲೆಯು ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ 19ನೇ ಸ್ಥಾನಗಳಿಸಿತ್ತು. ಆದರೆ ಈ ಬಾರಿ 11 ನೇ ಸ್ಥಾನಗಳಿಸಿದೆ. ಜಿಲ್ಲೆಯು ಕಳೆದ ಬಾರಿಗಿಂತಲೂ ಈ ಬಾರಿ ಫಲಿತಾಂಶದಲ್ಲಿ 8 ಸ್ಥಾನ ಮೇಲೆರಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವ ತಂದೆ ತಾಯಿ ಮಕ್ಕಳಿಗೆ ಮಾದರಿಯಾಗಬೇಕು. ಆಸ್ತಿಪಾಸ್ತಿ ಗಳಿಸಿ ಮಕ್ಕಳನ್ನು ಯೋಗವಂತರನ್ನಾಗಿಸುವ ಬದಲು ಸಂಸ್ಕಾರ ಕಲಿಸಿ ಯೋಗ್ಯವಂತರನ್ನಾಗಿಸಿ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಸಂಖ್ಯೆ ಹೆಚ್ಚಾಗಿದೆ. ಕುಟುಂಬದ ಒತ್ತಾಯಕ್ಕೆ ಅಥವಾ ಇನ್ನಿತರ ಕಾರಣಗಳಿಂದ ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಬಾಲ್ಯ ವಿವಾಹವನ್ನು ಮಾಡದೇ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ. ಶಿಕ್ಷಣ ಎನ್ನುವಂತಹದ್ದು 100 ಮೀ ಓಟವಲ್ಲ, ಮ್ಯಾರಥಾನ್ ಓಟವಿದ್ದಂತೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ನಿರಂತರವಾಗಿರುತ್ತದೆ. ಗುರಿ ತಲುಪವವರೆಗೂ ಸ್ಪರ್ಧೆಯಿಂದ ಹಿಂದೆ ಜರಿಯದೆ ಶಿಕ್ಷಣದ ಪ್ರತಿ ಘಟ್ಟದಲ್ಲೂ ಸಾಧನೆಯ ಶಿಖರವನ್ನೇರಿ ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು. ಇದೇ ವೇಳೆ ಮಂಡ್ಯ ವಿಧಾನಸಭಾ ಕ್ಷೇತ್ರದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಸಕ ರವಿಕುಮಾರ್ ಗಣಿಗ ಅವರು ತಲಾ ಒಂದು ಸಾವಿರ ರೂ ನಗದು, ಪ್ರಮಾಣ ಪತ್ರ ನೀಡಿ ನೀಡಿ ಗೌರವಿಸಿದರು.

ಭವಿಷ್ಯದ ಮಕ್ಕಳಿಗೆ ಪ್ರೇರಣೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಶಿಕ್ಷಣ ಎನ್ನುವುದು ‘ಹುಲಿಯ ಹಾಲು’ ಇದ್ದಂತೆ. ಶಿಕ್ಷಣ ಎನ್ನುವ ಹಾಲನ್ನು ಕುಡಿದರೆ ರಾಜ್ಯ, ದೇಶ ಹಾಗೂ ಪ್ರಪಂಚದಲ್ಲೇ ಖ್ಯಾತಿಯಾಗಬಹುದು. ಇಂದು ಸನ್ಮಾನಿತರಾಗುತ್ತಿರುವ ವಿದ್ಯಾರ್ಥಿಗಳು ಸಾಧನೆ ಮಾಡಿ ಮುಂದಿನ ಮಕ್ಕಳಿಗೆ ನೀವೇ ಸನ್ಮಾನ ಮಾಡುವಂತವರಾಗಬೇಕೆಂದು ಹೇಳಿದರು.

ಈ ಹಿಂದೆ ಒಂದು ಕಾರು ಖರೀದಿಸಬೇಕೆಂದರೆ ಮಂಡ್ಯದವರು ಬೆಂಗಳೂರು, ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಇಂದು ಜಿಲ್ಲೆಯಲ್ಲಿಯೇ ನಾವು ಖರೀದಿಸಬಹುದು. ಮಂಡ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿರುವುದರಿಂದಲೇ ನಗರಕ್ಕೆ ಹಲವು ಉದ್ಯಮಗಳು ಬರುತ್ತಿವೆ. ಇದರಿಂದಾಗಿ ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಮಂಡ್ಯ ಬದಲಾವಣೆಯಾಗಿದೆ. ನವ ಮಂಡ್ಯ ಕಟ್ಟಲು ವಿದ್ಯಾರ್ಥಿಗಳು ನನ್ನ ಕೈಜೋಡಿಸಿ. ಇಂದು ನಾವು ಸ್ಪರ್ಧಾತ್ಮಕ ಕಾಲದಲ್ಲಿದ್ದೇವೆ, ಶಿಕ್ಷಣ ವ್ಯವಸ್ಥೆಯಲ್ಲಿ ಶೇ.90ರಷ್ಟು ಅಂಕಗಳಿಸಿದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನು ಹೆಚ್ಚಿನ ಜ್ಞಾನಾರ್ಜನೆ ನಡೆಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net