

ಮಂಡ್ಯ: ಸಿರಿವಂತಿಕೆ ಇರುವವರೆಲ್ಲರೂ ಸಹಾಯ ಮಾಡುವ ಮನೋಭಾವ ಹೊಂದಿರುವುದಿಲ್ಲ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ಸುಶೀಲಾ ಜಯರಾಂ ದತ್ತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರಸೂತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವೈದ್ಯಕೀಯ ವಿದ್ಯಾರ್ಥಿನಿ ಪೂಜಾ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ಕಳಕಳಿ ಇರುವ ಟ್ರಸ್ಟ್‌ಗಳು ಸೇವೆ ಹಾಗೂ ಸಾಧನೆ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಮಿಮ್ಸ್‌ನ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಮಾತನಾಡಿ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣವಾಗುವುದು ಮೊದಲ ಹಂತವಾದರೆ, ಸಮಾಜದಲ್ಲಿ ಸೇವೆಯ ಮೂಲಕ ಜನರ ಪ್ರಶಂಸೆಗಳಿಸುವುದು ಅದೇ ನಿಜವಾದ ಸಾಧನೆ ಎಂಬುದನ್ನು ಎಲ್ಲರೂ ಗಮನಲ್ಲಿಟ್ಟುಕೊಂಡು ಸಾಗಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಡಾ.ಜಯರಾಂ ಮಾತನಾಡಿ, ಮಿಮ್ಸ್‌ನಲ್ಲಿ ಡಯಾಲಿಸಿಸ್ ಕೇಂದ್ರ ಇರಲಿಲ್ಲ. ಹೆರಿಗೆ ವಾರ್ಡ್‌ನಲ್ಲಿ ಕೊಠಡಿಗಳ ಕೊರತೆಯಿತ್ತು. ಅದನ್ನು ಹೆಚ್ಚುವರಿ ಕೊಠಡಿ ಮಾಡಿ ಜನರ ಸೇವೆಗೆ ನೀಡಲಾಯಿತು. ಇಂತಹ ಹಲವು ಯೋಜನೆಗಳನ್ನು ಜನಪರವಾಗಿ ಮಾಡಲು ನಾವು ಕಾರ್ಯೋನ್ಮುಕರಾಗಿದ್ದೇವೆ ಎಂದು ಹೇಳಿದರು.
ಮಿಮ್ಸ್ ಪ್ರಾಂಶುಪಾಲ ಡಾ.ತಮ್ಮಣ್ಣ, ಡಾ.ಸವಿತಾ, ಮುಖ್ಯ ಆಡಳಿತಾಧಿಕಾರಿ ಜಾನ್ಸನ್, ಡಾ.ಕಾವ್ಯಶ್ರೀ, ಡಾ.ಮನೋಹರ್, ಡಾ.ಶಿಲ್ಪಾ ಇತರರಿದ್ದರು.