

ಮಂಡ್ಯ: ಸಮಾಜದಲ್ಲಿರುವ ದೋಷವನ್ನೇ ಹುಡುಕಿಕೊಂಡು ಹಾಗೂ ನಿಂದನೆ ಮಾಡಿಕೊಂಡಿದ್ದರೆ ಆತ ನಾಯಕನಾಗುವುದಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಗರಿಕ ಸನ್ಮಾನ ಸಮಿತಿ, ದೇವರಕಾಡು ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ 2022ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್‌ನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಪಾತ್ರವಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ನಾಯಕರಾಗುವವರು ಬರೀ ನಿಂದನೆ ಮಾಡುವುದನ್ನು ಬಿಡಬೇಕು. ಕೇವಲ ಟೀಕೆ ಮಾಡುತ್ತಲೇ ಇದ್ದರೆ ಅದರ ನಾಯಕನ ಅವಶ್ಯಕತೆ ಇಲ್ಲ. ಬದಲಿಗೆ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು. ಕತ್ತಲಿನಲ್ಲಿರುವ ಜನರ ಬದುಕಿನಲ್ಲಿ ನಂದಾದೀಪ ಬೆಳಗಿಸಬೇಕು ಎಂದು ಸಲಹೆ ನೀಡಿದ ಅವರು, ಸಮಾಜಕ್ಕೆ ಅನುಕೂಲ ಮಾಡುವಂತಹ ಹಲವು ಗಣ್ಯರಿದ್ದಾರೆ. ಅದೇ ಸಾಲಿಗೆ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಸೇರುತ್ತಾರೆ. ಆಚಾರದಲ್ಲಿ ಅರಸ, ನೀತಿಗೆ ಪ್ರಭುವಿನಂತಿದ್ದಾರೆ ಎಂದರು.
ಪ್ರಗತಿಪರ ಚಿಂತಕ ಪ್ರೊ.ಪಿ.ವಿ.ನಂಜರಾಜೇ ಅರಸ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿರೋಧ ಪಕ್ಷದ ಹಾಗೂ ವಿಧಾನ ಪರಿಷತ್‌ನ ಅತ್ಯುತ್ತಮ ಶಾಸಕರೆಂದು ಗುರುತಿಸುವ ಕೆ.ಟಿ.ಶ್ರೀಕಂಠೇಗೌಡ ಅವರ ಕೆಲಸ ಒಂದು ರೀತಿ ಸಾಧನೆ ಆಗಿದೆ. ಕರ್ನಾಟಕವನ್ನು ದೆಹಲಿ ಸಿಂಹಾಸನದಲ್ಲಿ ಕೂರಿಸಿದ ಏಕಮಾತ್ರ ವ್ಯಕ್ತಿ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರಾಗಿದ್ದು, ಅವರ ಅತ್ಯಂತ ಆಪ್ತ ವ್ಯಕ್ತಿ ಶ್ರೀಕಂಠೇಗೌಡ ಎಂದರು.
ಬಿಜೆಪಿ ಸರ್ಕಾರವಿದ್ದಾಗಲೇ ವಿರೋಧ ಪಕ್ಷದ ಶಾಸಕ ಕೆ.ಟಿ.ಶ್ರೀಕಂಠೇಗೌಡರನ್ನು ಗುರುತಿಸಿದೆ. ಬಿಜೆಪಿಯ ನಾಯಕರ ಹಿಂದೆ ಸುತ್ತುವ ಅವರ ಬಾಲಂಗೋಚಿ ಶಾಸಕರನ್ನ ಬಿಟ್ಟು ಈ ಬಡಪಾಯಿಯನ್ನು ಗುರುತಿಸಿದೆ ಎಂದರೆ ಇವರ ಗುಣ ಹೇಗಿರಬೇಕು. ಮೂಲತಃ ಇವರು ಸಹ ಶಿಕ್ಷಕರಾಗಿದ್ದವರೇ, ಶಿಕ್ಷಕರು ನಿವೃತ್ತರಾಗಿದ್ದರೂ ಸಹ ಅಧ್ಯಯನ ಮಾಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ನಿವೃತ್ತ ಪ್ರಾಂಶುಪಾಲ ಎಸ್.ಟಿ.ಶಂಕರಗೌಡ ಇತರರಿದ್ದರು.