

ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ನೋಡಿಕೊಳ್ಳುವುದು ಪ್ರತಿ ಮಹಿಳೆಯ ಕರ್ತವ್ಯ ಎಂದು ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಂ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ ಹಾಗೂ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಾಧಕಿಯರಿಗೆ ಸನ್ಮಾನ ಹಾಗೂ ಕವಯತ್ರಿ ಎಚ್.ಆರ್.ಕನ್ನಿಕಾ ಅವರ ಬದುಕ ಶುಭದೊಸಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಮಾಜದಲ್ಲಿ ಶಕ್ತಿಯಾಗಿ ನಿಲ್ಲಬೇಕು. ಜಿಲ್ಲೆಯಲ್ಲಿ ದೊಡ್ಡ ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಹತ್ಯೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆಯರಿಗೆ ನೀಡಲಾಗುತ್ತಿದ್ದ ವೇತನ ತಾರತಮ್ಯದ ಬಗ್ಗೆ ದನಿಯೆತ್ತಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರೂಡಿಸಿಕೊಳ್ಳಬೇಕು. ತಮಗೆ ಅನ್ಯಾಯವಾದಾಗ ದನಿ ಎತ್ತುವುದರ ಜತೆಗೆ ಸಂಘಟಿತರಾಗಬೇಕು. ಮಹಿಳೆಗೆ ಸಮಾನ ಅವಕಾಶ ಹಾಗೂ ರಕ್ಷಣೆಯನ್ನು ಸಂವಿಧಾನ ನೀಡಿದೆ. ಇಂತಹ ಸರಳ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಪ್ರತಿ ಹಂತದಲ್ಲಿ ಮಹಿಳೆಯರು ನಿರ್ಭಯವಾಗಿ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮಹಿಳೆಯರಿಗೆ ಪುರುಷರಕ್ಕಿಂತ ಹೆಚ್ಚಿನ ಕೆಲಸ ಮಾಡುವ ಶಕ್ತಿ ಇದೆ. ಮನೆ ನಿರ್ವಹಿಸುವುದರ ಜತೆಗೆ ಹೊರಗೆ ಹೋಗಿ ಉದ್ಯೋಗ ಮಾಡುತ್ತಾರೆ. ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ನೀಡುವ ಕೆಲಸಗಳು ವೇಗವಾಗಿ ನಡೆಯಬೇಕು ಎಂದರು.
ಸಮಗ್ರ ಶಿಕ್ಷಣ ಉಪಯೋಜನಾ ಸಮನ್ವಯಾಧಿಕಾರಿ ಟಿ.ಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಕನ್ನಿಕಾ ಶಿಲ್ಪಾ ನವೋದಯ ಟ್ರಸ್ಟ್ ಅಧ್ಯಕ್ಷೆ ಕವಯತ್ರಿ ಎಚ್.ಆರ್.ಕನ್ನಿಕಾ, ಉಪಾಧ್ಯಕ್ಷೆ ಎಲ್.ಕಮಲಾ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಮಂಗಲ ಜಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯದರ್ಶಿ ಕೆ.ಎಂ.ಕೃಷ್ಣೇಗೌಡ ಇತರರಿದ್ದರು.
ಪಿಇಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಮಂಗಲ ಕೃತಿ ಲೋಕಾರ್ಪಣೆ ಮಾಡಿದರು. ಅಂತೆಯೇ ಮಂಜುಳಾ(ಸಾವಯುವ ಕೃಷಿ), ಡಾ.ಬಿ.ಎಸ್.ಸೀತಾಲಕ್ಷ್ಮೀ(ಆಯುಷ್ ವೈದ್ಯೆ), ಡಾ.ಎಸ್.ಪಿ.ಮಂಜುಳಾ(ಸಾಹಿತ್ಯ), ಡಾ. ವರ್ಷ ಹೂಗಾರ್(ವೈದ್ಯೆ ಮತ್ತು ಗಾಯಕಿ), ಸಿ.ಕುಮಾರಿ(ಸಾಮಾಜಿಕ ಹೋರಾಟ), ಎಂ.ಪಿ.ಸವಿತಾ(ಶಿಕ್ಷಣ), ಎಲ್.ಉಮಾ(ಕಾನೂನು), ಎಸ್.ಜಿ.ವಿಜಯಾ(ಯೋಗ), ಎನ್.ಮಾಧುರಿ(ಕ್ರೀಡೆ), ಎಂ.ಎಸ್.ಬಿಂದುರಾವ್(ನೃತ್ಯ), ಸೌಮ್ಯಾ(ಸಂಗೀತ), ಜಯಶ್ರೀ(ಪೊಲೀಸ್), ಕೆ.ಎಸ್.ಶೋಭಾ(ಪ್ರಸಾದನ), ಸೌಮ್ಯಶ್ರೀ(ಮಾಧ್ಯಮ), ಆರ್.ಮಹಾಲಕ್ಷ್ಮೀ(ರಂಗಭೂಮಿ), ರಾಣಿ ಚಂದ್ರಶೇಖರ್(ಸಂಪನ್ಮೂಲ ವ್ಯಕ್ತಿ), ಟಿ.ಎಂ.ಸೌಮ್ಯಾ(ಸಾರಿಗೆ), ಭಾರತಿಕುಮಾರ್(ಜನಪದ), ಜಿ.ಎಸ್.ನಂದಿನಿ(ನಿರೂಪಣೆ), ಎನ್.ಅನಿರಾ(ಶುಶ್ರೂಷಕಿ), ಅಮ್ಮಯ್ಯ(ಪೌರಕಾರ್ಮಿಕ) ಅವರನ್ನು ಸನ್ಮಾನಿಸಲಾಯಿತು.