

ವಿಜಯವಾಣಿ ಸುದ್ದಿಜಾಲ ಉಡುಪಿ
ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ, ಜಲ ಅವಘಡದಲ್ಲಿ ಮೃತಪಟ್ಟವರ ದೇಹಗಳನ್ನು ಮೇಲೆತ್ತಿ ಸಹಕರಿಸುವ ಮಲ್ಪೆಯ ಮುಳುಗುತಜ್ಞ, ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಸೇವೆಗೆ ಯಾರಿಂದಲೂ ಬೆಲೆ ಕಟ್ಟಲಾಗದು ಎಂದು ಅರುಣಕುಮಾರ್ ಪುತ್ತಿಲ ಅಭಿಪ್ರಾಯಪಟ್ಟರು.
ಮಲ್ಪೆಯ ಈಶ್ವರ್ ಮಲ್ಪೆ ಅವರ ಮನೆಗೆ ಸೋಮವಾರ ಭೇಟಿ ನೀಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 1 ಲಕ್ಷ ರೂ. ಚೆಕ್ಅನ್ನು ಈಶ್ವರ್ ಮತ್ತು ಗೀತಾ ದಂಪತಿಗೆ ಹಸ್ತಾಂತರಿಸಿ, ಅವರನ್ನು ಸನ್ಮಾನಿಸಿ ಮಾತನಾಡಿದರು.
ತನ್ನ ಮಕ್ಕಳು ಅಂಗವಿಕಲರಾಗಿದ್ದರೂ, ತೀವ್ರ ಅನಾರೋಗ್ಯದಿಂದಿದ್ದರೂ ತನ್ನ ಮನೆಯ ಪರಿಸ್ಥಿತಿಯನ್ನೂ ಲೆಕ್ಕಿಸದೆ ಕಷ್ಟದಲ್ಲಿ ಸಿಲುಕಿದವರ ರಕ್ಷಣೆಗೆ ಎಂತಹ ಕಠಿಣ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಈಶ್ವರ್ ಮಲ್ಪೆ ಅಲ್ಲಿ ಪ್ರತ್ಯಕ್ಷವಾಗುತ್ತಾರೆ. ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದ್ದ ಕೇರಳದ ಚಾಲಕ ಅರ್ಜುನ್ ಹಾಗೂ ಲಾರಿ ಗುರುತಿಸುವಲ್ಲಿಯೂ ಈಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ಅವರನ್ನು ಕಡೆಗಣಿಸಿರುವುದು ಬೇಸರ ತಂದಿದೆ ಎಂದರು.
ದೃಶ್ಯ ಮಾಧ್ಯಮಗಳಲ್ಲಿ ಈಶ್ವರ್ ಮಲ್ಪೆ ಕುರಿತಾದ ವರದಿ ವೀಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು "ಪುತ್ತಿಲ ಬ್ರಿಗೇಡ್' ವಾಟ್ಸಾಪ್ ಗ್ರೂಪ್ನಲ್ಲಿ ಸಹಕಾರದ ಸಂದೇಶ ಹಾಕಿದ್ದರು. ಕೇವಲ 7 ಗಂಟೆಯಲ್ಲಿ ಒಂದು ಲಕ್ಷ ರೂ. ಸಂಗ್ರಹವಾಗಿದ್ದು, ಇದು ಈಶ್ವರ್ ಮಲ್ಪೆ ಅವರ ಕುರಿತು ಜನರಿಗಿರುವ ಅಭಿಮಾನ ತೋರಿಸುತ್ತದೆ ಎಂದು ಟ್ರಸ್ಟ್ನ ಪ್ರಮುಖರು ತಿಳಿಸಿದ್ದಾರೆ.
ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಮಂಜು ಕೆ. ಮಲ್ಪೆ, ಉಡುಪಿ ಹಿಂದು ಯುವಸೇನೆಯ ನಗರ ಅಧ್ಯಕ್ಷ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಪ್ರದಿಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಇತರರು ಉಪಸ್ಥಿತರಿದ್ದರು.
ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಈಶ್ವರ್ ಮಲ್ಪೆ ಅಗರ್ಭ ಶ್ರೀಮಂತ. ಅವರ ಸೇವೆಯನ್ನು ಕೇವಲ ಶ್ಲಾಘಿಸಿದರೆ ಸಾಕಾಗುವುದಿಲ್ಲ. ಎಲ್ಲರೂ ಅವರನ್ನು ಬೆಂಬಲಿಸಬೇಕು. 200ಕ್ಕೂ ಅಧಿಕ ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ "ಆಪದ್ಬಾಂಧವ ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ' ಸ್ಥಾಪಿಸಬೇಕು. ತನ್ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚಿಸುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು. ಅವರ ಸಾಮಾಜಿಕ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅರುಣಕುಮಾರ್ ಪುತ್ತಿಲ ಒತ್ತಾಯಿಸಿದರು.
ನಾನು ಹಣಕ್ಕೋಸ್ಕರ ಈ ಸೇವೆ ಮಾಡುತ್ತಿಲ್ಲ. ಇದುವರೆಗೂ ನಾನು ಯಾರಿಂದಲೂ ಹಣ ಪಡೆದಿಲ್ಲ. ದೇವರು ನನಗೆ ನೊಂದವರಿಗೆ ಸಹಕರಿಸುವ ಶಕ್ತಿ ನೀಡಿದ್ದರಿಂದ ನನ್ನ ತಂಡದೊಂದಿಗೆ ಈ ಕಾರ್ಯ ಮಾಡುತ್ತಿದ್ದೇನೆ.| ಈಶ್ವರ್ ಮಲ್ಪೆ. ಸಮಾಜಸೇವಕ