

ಭಾಲ್ಕಿ: ಗಡಿ ಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾ ದೇಗುಲ ತೆರೆದು ಸೇವಾ ಭಾವದಿಂದ ಶಿಕ್ಷಣ ನೀಡುತ್ತಿರುವುದು ಶ್ರೇಷ್ಠ ಕಾರ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ೪೦ ಮಕ್ಕಳಿಂದ ಶುರುವಾದ ಸಂಸ್ಥೆಯಲ್ಲಿ ಈಗ ೨೦ ಸಾವಿರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಮಕ್ಕಳು ಶಿಕ್ಷಣ ಜತೆಗೆ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ೧೯೯೨ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನಡಿ ತೆರೆದ ವಿದ್ಯಾ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಭಕ್ತರ ಸಹಕಾರ, ನುರಿತ ಶಿಕ್ಷಕರ ನೇಮಕದಿಂದಾಗಿ ರಾಜ್ಯದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಆಕಾಶ್ ಎಸ್., ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಡಿಡಿಪಿಯು ಚಂದ್ರಕಾಂತ ಶಾಹಬಾದಕರ್, ಡಿಡಿಪಿಐ ಸಲೀಂ ಪಾಶಾ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಇತರರಿದ್ದರು. ಮಧುಕರ ಗಾಂವಕರ ನಿರೂಪಣೆ ಮಾಡಿ ವಂದಿಸಿದರು.
ಮಕ್ಕಳೊಂದಿಗೆ ಸಂವಾದ: ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಕೆಲ ಸಮಯ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರ ವಿವಿಧ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರ ನೀಡಿ ಸಂದೇಹಗಳನ್ನು ದೂರ ಮಾಡಲು ಪ್ರಯತ್ನಿಸಿದರು.
ಗಮನಸೆಳೆದ ಮಲ್ಲಗಂಬ ಪ್ರದರ್ಶನ: ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮಲ್ಲಗಂಬ ಮತ್ತು ರೋಪ ಮಲ್ಲಗಂಬ ಪ್ರದರ್ಶಿಸಿ ಸಭಿಕರ ಗಮನ ಸೆಳೆದರು. ದೈಹಿಕ ನಿರ್ದೇಶಕ ಅನೀಲಕುಮಾರ ಪಾಟೀಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಟ್ಟಿಗೆ ಕಂಬ ಹಾಗೂ ಹಗ್ಗದ ಮೇಲೆ ವಿವಿಧ ಆಸನಗಳನ್ನು ತೋರಿಸಿ ಮೆಚ್ಚುಗೆಗೆ ಪಾತ್ರರಾದರು.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರ ಸರಳತೆ, ನಯ, ವಿನಯ ಎಲ್ಲರಿಗೂ ಸ್ಫೂರ್ತಿಯಾಗಿದೆ. ಇಂಥ ಅಧಿಕಾರಿಗಳು ನಮ್ಮ ಸಂಸ್ಥೆಗೆ ಭೇಟಿ ನೀಡಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ
ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಬದುಕು ಸಾಗಿಸುತ್ತಿದ್ದಾರೆ. ಇಂಥವರ ಭೇಟಿಯಿಂದ ಸಂಸ್ಥೆ ಕಾರ್ಯಚಟುವಟಿಕೆಗೆ ಇನ್ನಷ್ಟು ಆನೆಬಲ ಬಂದಂತಾಗಿದೆ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ