

ಹುಣಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ವಿಜಯವಾಣಿ ಮೈಸೂರು ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮತ್ತು ಹಿರಿಯ ಪತ್ರಕರ್ತರ ಎಸ್.ಟಿ.ರವಿಕುಮಾರ್ ಅವರನ್ನು ಹುಣಸೂರು ತಾಲೂಕು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಗೊಮ್ಮಟ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಕಳೆದ 10 ವರ್ಷಗಳಿಂದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳವಣಿಗೆಯು ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾಗಿದೆ. ಸಂಘದ ಕಾರ್ಯಚಟುವಟಿಕೆ, ಆರ್ಥಿಕ ಶಿಸ್ತು ಮತ್ತು ಪ್ರಶಸ್ತಿಗಳಿಗೆ ಆಯ್ಕೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳು ಅತ್ಯಂತ ಘನತೆಯೊಂದಿಗೆ ನಡೆದುಕೊಂಡು ಬರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಪ್ರಶಸ್ತಿಗೆ ಗುರುತಿಸುವುದು, ಸಮಾರಂಭ ಎಲ್ಲವೂ ಕಾಟಾಚಾರಕ್ಕೆ ನಡೆಯುತ್ತಿತ್ತೇನೋ ಎನಿಸುತ್ತಿತ್ತು. ಆದರೆ ಕಳೆದ 10 ವರ್ಷಗಳಿಂದ ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಅಲ್ಲದೆ ಕೇವಲ ಬೆಂಗಳೂರು, ಜಿಲ್ಲಾ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರಶಸ್ತಿಗಳು ಇದೀಗ ತಾಲೂಕು ಪತ್ರಕರ್ತರನ್ನೂ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತರು ತಮ್ಮನ್ನು ತಾವು ಗುರುತಿಸಿಕೊಳ್ಳುವ ಕಾರ್ಯ ಮಾಡಬೇಕಿದೆ. ಇದ್ದಾಗ ವ್ಯಕ್ತಿಯ ಗುಣ ಸತ್ಕರಿಸದ ಸಮಾಜ, ಅಗಲಿದ ನಂತರ ಹೊಗಳುವುದು ಸಮಾಜದ ಸಂಪ್ರದಾಯ. ಪತ್ರಕರ್ತರಾಗಿ ನಾವು ಈ ಸಂಪ್ರದಾಯದಿಂದ ಹೊರಬರಬೇಕು. ಸಾಧಕ ಪತ್ರಕರ್ತರನ್ನು ಮುಕ್ತವಾಗಿ ಗುರುತಿಸಿ, ಅಭಿನಂದಿಸಬೇಕು. ನಮ್ಮನ್ನು ನಾವು ಗುರುತಿಸಿಕೊಂಡಲ್ಲಿ ಸಮಾಜ ನಂತರ ನಮ್ಮನ್ನು ಗುರುತಿಸಲು ಸಾಧ್ಯ ಎಂದರು.
ಪ್ರಶಸ್ತಿ ಪುರಸ್ಕೃತ ಎಸ್.ಟಿ.ರವಿಕುಮಾರ್ ಮಾತನಾಡಿ, ಜಿಲ್ಲಾ ಪತ್ರಕರ್ತರಾಗಿ ಪ್ರಶಸ್ತಿಗೆ ಭಾಜನರಾದ ನಮ್ಮನ್ನು ತಾಲೂಕು ಸಂಘವು ಅಭಿನಂದಿಸುವ ಮೂಲಕ ಸಕಾರಾತ್ಮಕ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ನಮ್ಮ ಮನೆಯಲ್ಲಿ ನಮಗೆ ಸಿಗುವ ಅಭಿನಂದನೆ ಹೆಚ್ಚು ಸಂತಸ ತರುತ್ತದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಕಾರ್ಯದರ್ಶಿ ಶಂಕರ್, ರಾಘವೇಂದ್ರ, ಕಿರಣ್‌ಕುಮಾರ್, ಪದಾಧಿಕಾರಿಗಳು ಇದ್ದರು.