

ಹೊನ್ನಾಳಿ: ಕಳೆದ 60 ವರ್ಷಗಳಿಂದೀಚೆಗೆ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಅತಿವೇಗವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಲೇ ಇದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಶನಿವಾರ ನಗರದಲ್ಲಿ ಹೊನ್ನಾಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರ ಇಷ್ಟೊಂದು ಮುಂದುವರಿದರೂ ಬಡವರಿಗೆ ಚಿಕಿತ್ಸೆ ನಿಲುಕುತ್ತಿಲ್ಲ. ದುಬಾರಿ ಚಿಕಿತ್ಸೆಯಿಂದ ಬಡವರು ನಲುಗಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಚಿಂತಿಸಬೇಕಾಗಿದೆ ಎಂದರು.
ಕರೋನಾ ಸಂದರ್ಭದಲ್ಲಿ ಔಷಧ ವಾಪಾರಿಗಳು, ನರ್ಸ್‌ಗಳು ಮತ್ತು ವೈದ್ಯರ ಸೇವೆ ಪ್ರಶಂಸನೀಯ ಎಂದರು.
ಔಷಧ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಶೈಲೇಶ್ ಮಾತನಾಡಿ, ದಾವಣಗೆರೆಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಭವನ ನಿರ್ಮಾಣವಾಗಿದ್ದು, ಅದೇರೀತಿ ಹೊನ್ನಾಳಿ ತಾಲೂಕಿನಲ್ಲೂ ಭವನ ನಿರ್ಮಾಣ ಮಾಡುವ ಉದ್ದೇಶವಿದೆ. ಆದ್ದರಿಂದ ಒಂದು ನಿವೇಶನ ಕೊಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಗಾಯಿತ್ರಿ ಮೆಡಿಕಲ್ಸ್ ನ ಪ್ರಕಾಶ್ ಮಾತನಾಡಿ, ಜಾರ್ಖಂಡ್ ಸರ್ಕಾರ ಆನ್‌ಲೈನ್ ಔಷಧ ವ್ಯಾಪಾರ ರದ್ದುಪಡಿಸಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಇದನ್ನು ರದ್ದುಪಡಿಸುವಂತೆ ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.
ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿದರು. ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತೆ ಟಿ. ನಾಗರತ್ನಮ್ಮ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ದತ್ತಾತ್ರೇಯ ವೈಶ್ಯರ್, ರಾಘವೇಂದ್ರ, ಲಿಂಗಾಪುರ ಸೋಮಶೇಖರ್, ಬೆನಕನಹಳ್ಳಿ ಧನಂಜಯ, ನ್ಯಾಮತಿ ಮಹೇಶ್ವರಪ್ಪ ಹಾಗೂ ತಾಲೂಕಿನ 25 ಕ್ಕೂ ಹೆಚ್ಚು ಔಷಧ ಅಂಗಡಿಗಳ ಮಾಲಿಕರು ಹಾಜರಿದ್ದರು. ಲೋಕೇಶ್ ಬಾಬು ವಂದಿಸಿದರು.