ನಿವೃತ್ತ ಮುಖ್ಯಶಿಕ್ಷಕರಿಗೆ ಹೃದಯಸ್ಪರ್ಶಿ ಗುರುವಂದನೆ : ಕೆ.ಯಶವಂತ ರೈ ಶಿಷ್ಯರಿಂದ ಗೌರವಾರ್ಪಣೆ 37 ವರ್ಷದ ವಿದ್ಯಾರ್ಥಿಗಳ ಸಮಾಗಮ

yash
Published on

ಸುಬ್ರಹ್ಮಣ್ಯ: ಕಳೆದ ಸೆ.30ರಂದು ನಿವೃತ್ತರಾದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ಯಶವಂತ ರೈ ಅವರಿಗೆ ಶಿಷ್ಯ ವೃಂದದ ಆಶ್ರಯದಲ್ಲಿ ಹೃದಯಸ್ಪರ್ಶಿ ಗುರು ವಂದನಾ ಮತ್ತು ಗೌರವಾರ್ಪಣಾ ಕಾರ್ಯಕ್ರಮ ಬುಧವಾರ ಕಾಲೇಜಿನಲ್ಲಿ ನಡೆಯಿತು.

ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿ ಗುರುವಂದನೆ ಸಲ್ಲಿಸಿದರು.ಹಳೇ ವಿದ್ಯಾರ್ಥಿಗಳು ಮತ್ತೆ ವಿದ್ಯಾಸಂಸ್ಥೆಗೆ ಆಗಮಿಸಿ ಬಾಲ್ಯದ ನೆನಪು ಮೆಲುಕು ಹಾಕಲು ಈ ಕಾರ್ಯಕ್ರಮ ಕಾರಣವಾಯಿತು. ಶಿಷ್ಯರಿಂದ ಗೌರವಾರ್ಪಣೆ: ಯಶವಂತ ರೈ ಅವರ 37 ವರ್ಷ ಸೇವಾವಧಿಯ ಶಿಷ್ಯರ ವತಿಯಿಂದ ಗೌರವಾರ್ಪಣೆ ನೆರವೇರಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿಯವರು ಯಶವಂತ ರೈ ಮತ್ತು ಪತ್ನಿ ಸುಜಾತಾ ದಂಪತಿಯನ್ನು ಸನ್ಮಾನಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರಾಚಾರ್ಯ ಸೋಮಶೇಖರ ನಾಯಕ್, ಹಳೇ ವಿದ್ಯಾರ್ಥಿ ಸಂಘದ ರಾಜೇಶ್ ಎನ್.ಎಸ್ ಇದ್ದರು.

ಗುರು ವಂದನೆ : ಗುರುಗಳಿಗೆ ಶಾಲು ಹೊದಿಸಿ ಹಾರ ಹಾಕಿ, ಪೇಟ ತೊಡಿಸಿ, ಸುಮಾರು 3.5 ಅಡಿ ಎತ್ತರದ ಗೌರವಾರ್ಪಣಾ ಪತ್ರ ನೀಡಿ ಆಶೀರ್ವಾದ ಪಡೆಯಲಾಯಿತು. ಕಾರ್ಯನಿರ್ವಹಣಾಧಿಕಾರಿಗಳು 24.56 ಗ್ರಾಂನ ಚಿನ್ನದ ಸರವನ್ನು ಶಿಷ್ಯರ ಪರವಾಗಿ ತೊಡಿಸಿದರು. ಶಿಷ್ಯರಾದ ಯಜ್ಞೇಶ್ ಮತ್ತು ನಿಶಾಂತ್ ತೆಂಗಿನಗರಿಗಳಿಂದ ಮಾಡಿದ ಗುಲಾಬಿ ಗೊಂಚಲು, ಸಾಂಪ್ರದಾಯಿಕ ವೈಶಿಷ್ಯಪೂರ್ಣ ಹಾರ ನೀಡಿದರು.

ಗುರುಗಳಿಂದ ತರಗತಿ : ಯಶವಂತ ರೈ ಹಳೇ ವಿದ್ಯಾರ್ಥಿಗಳಿಗೆ 1 ಗಂಟೆ ತರಗತಿ ನಡೆಸಿದರು. ಹಾಸ್ಯ ಮಿಶ್ರಿತ ವಿಜ್ಞಾನ ಪಾಠ ವಿದ್ಯಾರ್ಥಿಗಳಿಗೆ ಬೋಧಿಸಿದರು. ಹೃದಯದಲ್ಲಿನ ಭಾಗಗಳ ಬಗ್ಗೆ ಮತ್ತು ರಕ್ತ ಪರಿಚಲನೆ ಬಗ್ಗೆ ವಿವರಿಸಿದರು. 300 ವಿದ್ಯಾರ್ಥಿಗಳು ಪಾಠ ಕೇಳಲು ತರಗತಿಗೆ ಆಗಮಿಸಿದ್ದು ಗುರುಗಳ ಮೇಲಿನ ಪ್ರೀತಿಗೆ ಸಾಕ್ಷಿಯಾಗಿತ್ತು. ಬಳಿಕ ಪ್ರಾಚಾರ್ಯ ಸೋಮಶೇಖರ ನಾಯಕ್ ಮತ್ತು ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಹಳೇ ವಿದ್ಯಾರ್ಥಿಗಳಿಗೆ ತಾವೇ ಚಾಕಲೇಟ್ ನೀಡಿದರು.

ಅವಳಿ ವೇದಿಕೆಯಲ್ಲಿ ಸನ್ಮಾನ

ಪ್ರಧಾನ ವೇದಿಕೆಯಲ್ಲಿ ಶಿಷ್ಯರಿಂದ ಮತ್ತು ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು. ಇನ್ನೊಂದು ವೇದಿಕೆಯಲ್ಲಿ 37 ವರ್ಷದ 37 ಬ್ಯಾಚ್‌ನ ಶಿಷ್ಯ ವೃಂದದವರು ಪ್ರತ್ಯೇಕವಾಗಿ ಗುರುಗಳನ್ನು ಸನ್ಮಾನಿಸಿ ಸ್ಮರಣಿಕೆ ನೀಡಿದರು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಷ್ಯ ವೃಂದದವರು ಗೌರವಾರ್ಪಣೆ ಸಲ್ಲಿಸಿದರು. ವಿದೇಶ ಸೇರಿ ದೇಶಾದ್ಯಂತ ಉದ್ಯೋಗದಲ್ಲಿರುವ ಶಿಷ್ಯರು ಆಗಮಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ

ಪ್ರಧಾನ ವೇದಿಕೆಯಲ್ಲಿ ಯಶವಂತ ರೈ ಅವರ ಶಿಷ್ಯರಾದ ವಿದ್ವಾನ್ ಜಯಂತಿ ಭಟ್ ಆನೆಗುಡ್ಡಿ ಅವರಿಂದ ಶಾಸ್ತ್ರೀಯ ಸಂಗೀತ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಅರ್ಧನಾರೀಶ್ವರಿ ಭರತನಾಟ್ಯ ರೂಪಕ ನಡೆಯಿತು. ಅಂಕಿತಾ, ದಿಲೀಶ್, ಲಿಖಿತಾ, ಬಾಲಮುರಳಿ ಅವರಿಂದ ಸ್ಯಾಕ್ಸೋಪೋನ್ ಮತ್ತು ನಾಗಸ್ವರ ವಾದನ ನಡೆಯಿತು. ಶ್ರುತನ್ ಸುಬ್ರಹ್ಮಣ್ಯ, ಹರೀಶ್ ನಾಯಕ್, ಕಾರ್ತಿಕ್ ಸುಬ್ರಹ್ಮಣ್ಯ ಹಿಮ್ಮೇಳ ಸಹಕಾರ ನೀಡಿದರು. ಬಳಿಕ ಶಿಷ್ಯವೃಂದದಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಿತು. ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ಭಾಗವತಿಕೆಯಲ್ಲಿ ಸಹಕರಿಸಿದರು.

ನನ್ನ ಹಿಂದಿನ ಶಿಷ್ಯರು ಒಟ್ಟಾಗಿ ಸೇರಿ ಆಯೋಜಿಸಿದ ಈ ಕಾರ್ಯಕ್ರಮ ಐತಿಹಾಸಿಕ. ಕಾಲೇಜಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತೆ ಈ ಕಾರ್ಯಕ್ರಮ ಮೂಡಿಬಂದಿದೆ. ಕೊನೆಯದಾಗಿ ಹಳೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸೌಭಾಗ್ಯ ದೊರಕುವುದು ಒಂದು ಪುಣ್ಯ ಎಂದು ಭಾವಿಸಿ ಬೋಧನೆ ಮಾಡಿದೆ. ನಾನು ಕಲಿತ ಶಾಲೆಯಲ್ಲಿ ನಿವೃತ್ತನಾಗಿ ಹೋಗುವ ಸಂದರ್ಭ ಹಿಂದೆಂದೂ ಕಂಡಿರದ ಅವಿಸ್ಮರಣೀಯ ಸಮಾರಂಭವನ್ನು ನನಗಾಗಿ ನಡೆಸಿರುವುದು ಭಾಗ್ಯವೇ ಸರಿ. - ಯಶವಂತ ರೈ, https://www.vijayavani.net/navratri-mahotsav-at-kateelu-temple https://www.vijayavani.net/dead-body-found-8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net