

ಮೂಲ್ಕಿ: ಆಧುನಿಕ ಯುಗದಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಸಮಾಜದ ಪ್ರೋತ್ಸಾಹ ಮುಖ್ಯವಾಗಿದ್ದು, ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗುವಂತೆ ಸಹಕಾರ ಅಗತ್ಯ ಎಂದು ತುಳುನಾಡ ಬಂಟ ಮಹಿಳಾ ಸಂಘದ ಅಧ್ಯಕ್ಷೆ ಶಮಿನಾ ಆಳ್ವಾ ಹೇಳಿದರು.
ಕೆಂಚನಕೆರೆ ಅಂಬಾ ನಿವಾಸದಲ್ಲಿ ನಡೆದ ತುಳುನಾಡ ಬಂಟ ಮಹಿಳಾ ಸಂಘದ ಸಭೆ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಮಹಿಳೆಯರೇ ನಡೆಸಲ್ಪಡುವ ತುಳುನಾಡ ಬಂಟ ಮಹಿಳಾ ಸಂಘದ ಚಟುವಟಿಕೆಗಳು ಮಹಿಳೆಯರ ಜೀವನೋಪಾಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಿಂದ ಅನೇಕರು ಸಾಧಕರಾಗಿರುವುದು ಅಭಿನಂದನೀಯ ಎಂದರು.
ಸಾಧಕರ ನೆಲೆಯಲ್ಲಿ ಶ್ರೀ ಚಂದ್ರಶೇಖರ ಸ್ವಾಮಿ ಆಶ್ರಮದ ಸಂಚಾಲಕ ಪುನೀತಕೃಷ್ಣ ಅವರನ್ನು ಗೌರವಿಸಲಾಯಿತು. ತುಳುನಾಡ್ ಬಂಟ ಮಹಿಳಾ ಸಂಘದ ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ, ಕಾರ್ಯದರ್ಶಿ ಕುಸುಮಾ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಮಿನಾ ಆಳ್ವಾ ಕಾರ್ಯಕ್ರಮ ನಿರೂಪಿಸಿದರು. ರೋಹಿಣಿ ಶೆಟ್ಟಿ ವಂದಿಸಿದರು.