

ಮುದ್ದೇಬಿಹಾಳ: ತಾಲೂಕಿನ ಕುಂಚಗನೂರ ಗ್ರಾಮದ ಸಮಾಜ ಸೇವಕ- ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ- ಹಾಲಿ ನಿರ್ದೇಶಕ ನೀಲಕಂಠರಾವ್ ಶಂಭುರಾವ್ ದೇಶಮುಖ (ಕುಂಚಗನೂರ ಧಣಿ) ಅವರಿಗೆ ತಮಿಳುನಾಡಿನ ಹೊಸೂರಿನಲ್ಲಿರುವ ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರ್, ರೀಸರ್ಚ್ ಸಂಸ್ಥೆಯವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.
ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ದೇಶಮುಖರ ಅನನ್ಯ ಸೇವೆ ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನಿಸಲಾಗಿದೆ. ದೇಶಮುಖರು 1985ರಲ್ಲಿ ಕೃಷ್ಣಾ ನದಿಯ ನಾರಾಯಣಪುರ ಜಲಾಶಯದ (ಬಸವಸಾಗರ) ಹಿನ್ನೀರು ಬಳಕೆಗೆ ಸಂತ್ರಸ್ತ ರೈತರಿಗೆ ಅವಕಾಶ ಕಲ್ಪಿಸಲು ಹೋರಾಡಿದ್ದರು. ಬಸವಸಾಗರ ಹಿನ್ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ, 1989ರಲ್ಲಿ ಮಂಡಳ ಪಂಚಾಯಿತಿ ಸದಸ್ಯರಾಗಿ, ತಂಗಡಗಿ ಗ್ರಾಪಂ ಸದಸ್ಯರಾಗಿ, 2002ರಿಂದ 2007ರವರೆಗೆ ಪಿಎಲ್‌ಡಿ ಬ್ಯಾಂಕ್‌ಗೆ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈಗಲೂ ಪಿಎಲ್‌ಡಿ ಬ್ಯಾಂಕ್‌ಗೆ ಅವರು ನಿರ್ದೇಶಕರಾಗಿ ಮುಂದುವರಿದಿದ್ದಾರೆ.