ಡಾ.ನಿಶ್ಚಲಾನಂದನಾಥಸ್ವಾಮೀಜಿ ಪರಿಶುದ್ಧ ಕಾಯಕಯೋಗಿ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Honorary dedication program Mandya
Published on

ಮಂಡ್ಯ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರು ಆಡಳಿತ ಸೇವೆ ಮಾಡುವಾಗ ಅತ್ಯಂತ ಪ್ರಾಮಾಣಿಕ, ಪರಿಶುದ್ಧ ಹಾಗೂ ಕಾಯಕ ಯೋಗಿಯಾಗಿ ಕೆಲಸ ಮಾಡಿದ್ದಾರೆ. ಅವರ ಚಿಂತನೆ ಮತ್ತು ಆಲೋಚನೆ ನೋಡಿದರೆ ಮಹಾನ್ ವ್ಯಕ್ತಿತ್ವ ಹೊಂದಿರುವವರು ಜಿಲ್ಲಾಧಿಕಾರಿ ಡಾ.ಕುಮಾರ ಶ್ಲಾಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಾಗರಿಕ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಕ ಯೋಗಿಯಾಗಿ ಜನ ಮೆಚ್ಚುಗೆ ಪಡೆದಿರುವ ಡಾ.ಎಚ್.ಎಲ್.ನಾಗರಾಜು ಅವರು ಈಗ ಡಾ.ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಆಧ್ಯಾತ್ಮಿಕತೆ ದೀಪ ಹೊತ್ತಿಸಿದ್ದಾರೆ. ಇದು ಸಮಾಜದಲ್ಲಿ ಅದು ಸದಾ ಬೆಳಗುತ್ತಿರಲಿ ಎಂದು ಹಾರೈಸಿದರು.

ಸ್ವಾಮೀಜಿ ಆಗುವ ಮುನ್ನ ಡಾ.ಎಚ್.ಎಲ್.ನಾಗರಾಜು ಅವರು ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಯಶಸ್ವಿನ ಹಾದಿಯನ್ನು ಮುಟ್ಟಿ ಬರುವ ಎದೆಗಾರಿಕೆ, ಆತ್ಮಸ್ಥೈರ್ಯ, ಛಲಗಾರಿಕೆ ಹಾಗೂ ಆತ್ಮಶ್ರದ್ಧೆ ಇದೆ ಎಂಬುದನ್ನು ಅತ್ಯಂತ ಹತ್ತಿರದಿಂದ ನಾನು ನೋಡಿದ್ದೇನೆ. ಅಂತಹ ವ್ಯಕ್ತಿಯನ್ನು ಕರೆದು ಅವರಿಗೆ ಅಭಿನಂದನೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಸ್ಮರಿಸಿದರು.

ಸರ್ಕಾರಿ ಇಲಾಖೆಯಲ್ಲಿ ಪ್ರತಿ ವರ್ಷ ಅಧಿಕಾರಿಗಳಿಗೆ ಒಂದು ಗ್ರೇಡ್ ಕೊಡುತ್ತೇವೆ. ಈ ಹಿಂದೆ ಹಿಂದೊಮ್ಮೆ ಡಾ.ಎಚ್.ಎಲ್.ನಾಗರಾಜು ಅವರ ಬಗ್ಗೆ ಬರೆಯುತ್ತಿರಬೇಕಾದರೆ ಔಟ್‌ಸ್ಟಾಂಡಿಂಗ್ ಗ್ರೇಡ್ ಕೊಟ್ಟಿದೆ. ಮಾತ್ರವಲ್ಲದೆ ಇದಕ್ಕೆ ವಿವರಣೆಯನ್ನು ಬರೆದಿದ್ದೆ. ಸರ್ಕಾರಕ್ಕೆ ಅವರೊಬ್ಬರು ಆಸ್ತಿ ಎಂದು ಬರೆದಿದ್ದೆ. ಆದರೆ ಅದಕ್ಕೂ ಮೀರಿ ಅವರು ಸಮಾಜಕ್ಕೆ ಆಸ್ತಿಯಾಗಿದ್ದಾರೆ. ನಾಗರಾಜು ಅವರು ನಿಷ್ಠುರವಾದಿಯಾಗಿದ್ದರೂ ಮಾತೃ ಹೃದಯ ಹೊಂದಿದ್ದಾರೆ. ಇವರಿಗೆ ಪ್ರಜಾಪ್ರೇಮಿ ಎಂದೇ ಬಿರುದು ಕೊಡುತ್ತೇನೆ. ಈ ಬಿರುದಿಗೆ ತಕ್ಕಂತೆ ತಮ್ಮ ಅಧಿಕಾರ ಅವಧಿಯಲ್ಲಿ ಕಚೇರಿಗೆ ಬಂದಂತಹ ಸಾರ್ವಜನಿಕ ಕೆಲಸವನ್ನು ಸ್ಥಳದಲ್ಲಿಯೇ ಮಾಡಿಕೊಡುತ್ತಿದ್ದರು. ಸರಳತೆಯ ಜೀವನ ನಡೆಸಿಕೊಂಡು ಬಂದಿರುವ ಅವರು, ಅಧಿಕಾರದ ದೊಡ್ಡತನ ತೋರದೇ ಸರ್ಕಾರ ಕೊಟ್ಟಿರುವ ಕ್ವಾಟ್ರಸ್‌ನಲ್ಲಿ ಕೇವಲ ಚಾಪೆಯಲ್ಲಿ ಮಲಗುತ್ತಿದ್ದ ಸರಳ ಜೀವಿಯಾಗಿದ್ದರು. ಹಾಸನದಲ್ಲಿ ಇವರ ಸೇವೆಯನ್ನು ಈಗಲೂ ಹೋಗಳುತ್ತಿರುವುದು ನೋಡಿದರೆ, ನಾಗರಾಜು ಸಮಾಜಸೇವೆ ಏನೆಂಬುದು ತಿಳಿಯುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸರಳತೆ ಬದುಕು ನಡೆಸಿ ಜನರ ಮನಸನ್ನು ಗೆದ್ದಿರುವ ಎಚ್.ಎಲ್.ನಾಗರಾಜು ಅವರ ಜತೆ ನಾನು ಕೇವಲ ನಾಲ್ಕು ತಿಂಗಳು ಕೆಲಸ ಮಾಡಿದ್ದೇನೆ. ಆದರೆ ಕಾರ್ಯಕ್ರಮಕ್ಕೆ ಹೋದ ಕಡೆ ಇವರ ಬಗ್ಗೆ ಒಂದಷ್ಟು ವಿಷಯಗಳು ಕೇಳಿ ಬರುತ್ತಿತ್ತು. ಅದೇನೆಂದರೆ ಯಾವ ಅಧಿಕಾರಿಗಳು ಲಂಚವನ್ನ ತಿನ್ನೋಕೂ ಬಿಡಲ್ಲ, ಇವರೂ ತಿನ್ನಲ್ಲ ಎಂಬುವ ಮಾತನ್ನು ಹೇಳಿದಾಗ ನೆರೆದಿದ್ದ ಸಭಿಕರು ನಗೆಗಡಲಲ್ಲಿ ತೇಲಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಬಡತನದ ಬೇಗೆಯಲ್ಲಿಯೇ ಓದಿಕೊಂಡು ಅಧಿಕಾರ ಪಡೆದು ಪೂರ್ವಶ್ರಮದ ನಾಗರಾಜು ಅವರು ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ. ಇವರು ಜಿಲ್ಲಾಧಿಕಾರಿ ಆಗಬಹುದಿತ್ತು. ಇದರ ಮೂಲಕ ಐಷಾರಾಮಿ ಜೀವನ ನಡೆಸಬಹುದಿತ್ತು. ಸಾಮಾನ್ಯ ಸೇವೆಯೇ ಮುಖ್ಯ ಎನ್ನುತ್ತಿದ್ದ ನಾಗರಾಜು ಸನ್ಯಾಸಿ ಆಗುವುದು ಅಷ್ಟು ಸುಲಭವಲ್ಲ. ದೃಢವಾದ ಹೆಜ್ಜೆ ಇಟ್ಟು ಸನ್ಯಾಸಗೃಹ ಪ್ರವೇಶ ಮಾಡಬೇಕು. ಇದಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಆದಾಯ ತೆರಿಗೆ ಪ್ರಧಾನ ಆಯುಕ್ತ ಜಯರಾಂ ರಾಯಪುರ ಮಾತನಾಡಿ, ಸನ್ಯಾಸವನ್ನು ಏಕೆ ಸ್ವೀಕರಿಸಬೇಕೆನ್ನುವುದು ವೈಯಕ್ತಿಕ ವಿಚಾರವಾಗಿದೆ. ಸಮಾಜವು ಸನ್ಯಾಸಕ್ಕೆ ಹೆಚ್ಚು ಬೆಲೆ ಕೊಡುವುದಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಸೇವೆ ನೀಡುವ ಮೂಲಕ ಸನ್ಯಾಸತ್ವ ಪಡೆದುಕೊಂಡು ಸಮಾಜಕ್ಕೆ ಸೇವೆ ನೀಡಿದವರನ್ನು ಗೌರವಿಸುವ ಮನೋಭಾವವನ್ನು ನಾವು ಇಲ್ಲಿ ನಿಶ್ವಲಾನಂದನಾಥ ಸ್ವಾಮೀಜಿ ಅವರ ಮೂಲಕ ಕಾಣುತ್ತಿದ್ದೇವೆ. ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಕಾವಿ ಬಟ್ಟೆ ಧರಿಸಿ ಸಮಾಜಕ್ಕೆ ಆಧ್ಯಾತ್ಮಿಕ ಶಾಂತಿ ಬೋಧನೆ ಮಾಡುವುದು ಬಹಳ ಅಪರೂಪ ಆಗಿದೆ ಎಂದು ವಿವರಿಸಿದರು.

ಆದಿಚುಂಚನಗಿರಿ ಮಠದ ಕೊಮ್ಮೇರಹಳ್ಳಿ ಶಾಖೆಯ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗೇಶ್, ಬಿಜಿಎಸ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಆದರ್ಶ್, ಮುಖಂಡರಾದ ಕೋಣನಹಳ್ಳಿ ಜಯರಾಂ, ತಗ್ಗಹಳ್ಳಿ ವೆಂಕಟೇಶ್, ನಾಗರತ್ನಾ ಇತರರಿದ್ದರು.

ಕೋಣನಹಳ್ಳಿ ಕೆ.ಎಸ್.ಹೊನ್ನೇಗೌಡ ಅವರು ಕೊಡುಗೆಯಾಗಿ ನೀಡಿದ 75 ಸಾವಿರ ರೂ ಬೆಲೆಬಾಳುವ ಪೀಠದಲ್ಲಿ ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಪುಷ್ಪವೃಷ್ಠಿಗೈದು ಗೌರವ ಸಮರ್ಪಣೆ ಮಾಡಲಾಯಿತು. ಇದಕ್ಕೂ ಮೊದಲು ಅವರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net