

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ೨೦೨೧ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ದಶವರ್ಷ ಸಂಭ್ರಮದ ಸಮಾರೋಪ ಕಾರ್ಯಕ್ರಮ ಆ೨೯ ರಂದು ಕೊಡಗು ಗೌಡ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦.೩೦ ಗಂಟೆಗೆ ಲಕ್ಷ್ಮೀನಾರಾಯಣ ಕಜೆಗದ್ದೆರವರ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ ಕುಮಾರ್‌ರವರು ಉಪಸ್ಥಿತರಿದ್ದು, ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ವಿರಾಜಪೇಟೆ ಕ್ಷೇತ್ರದ ಶಾಸಕ ಕೊಂಬಾರನ.ಜಿ.ಬೋಪಯ್ಯ, ಮಡಿಕೇರಿ ವಿಧಾನ ಸಭಾಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ.ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಎನ್.ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಕೊಲ್ಯದ ಗಿರೀಶ್, ಪಿ.ಸಿ.ಜಯರಾಂ, ಸೂರ್ತಲೆ.ಅರ್.ಸೋಮಣ್ಣ, ಪೇರಿಯನ ಜಯಾನಂದ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
೨೦೨೧ ರ ಸಾಲಿನಲ್ಲಿ ಗೌರವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಪಿ.ಜಿ.ಅಂಬೆಕಲ್, ರಂಗಭೂಮಿ ಕ್ಷೇತ್ರದಿಂದ ತುಕರಾಂ ಏನೆಕಲ್ ಮತ್ತು ಸಂಸ್ಕೃತಿ ಕ್ಷೇತ್ರದಿಂದ ಚಂಡೀರ ಕೆ.ಬಸಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೫೦,೦೦೦ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಸುಬ್ರಾಯ ಸಂಪಾಜೆಯವರ ಮಾರ್ಗದರ್ಶನದಲ್ಲಿ ಸಂಪಾದನೆ ಮಾಡಿದ ಸೋಬಾನೆ ಹಾಡುಗಳು ಮತ್ತು ಚಂಡೀರ.ಕೆ.ಬಸಪ್ಪರವರು ಸಾಹಿತ್ಯ ಬರೆದಿರುವ ಅರೆಭಾಷಾ ಸುಪ್ರಭಾತದ ಧ್ವನಿಮುದ್ರಿಕೆ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮರಾಘವಯ್ಯ, ಧನಂಜಯ ಅಗೋಳಿಕಜೆ ಉಪಸ್ಥಿತರಿದ್ದರು.