

ಚಿಕ್ಕಮಗಳೂರು: ಅಂಗಡಿ ಮುಂಗಟ್ಟುದಾರರು ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಿ ಶೇ.60 ಕನ್ನಡ ಪದ ಬಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಅಂಗಡಿ ಮಾಲೀಕರಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು.
ನಗರದ ಬೋಳರಾಮೇಶ್ವರ ದೇವಾಲಯದಿಂದ ಐ.ಜಿ.ರಸ್ತೆ ಹಾಗೂ ಎಂ.ಜಿ.ರಸ್ತೆ ಮುಖಾಂತರ ಸಾಗಿದ ಕರವೇ ಕಾರ್ಯಕರ್ತರು ಪಾದಯಾತ್ರೆಯುದ್ದಕ್ಕೂ ಪ್ರತಿ ಅಂಗಡಿದಾರರ ನಾಮಫಲಕ ಗಮನಿಸಿ ಶೇ.60 ಕನ್ನಡ ಬಳಸಿದ ಮಾಲೀಕರಿಗೆ ಸನ್ಮಾನಿಸಿ, ಉಳಿದ ಮುಂಗಟ್ಟುದಾರರಿಗೆ ಮಾ.13ರ ತನಕ ಅಂತಿಮ ಗಡುವು ನೀಡಿ ಎಚ್ಚರಿಸಿದರು. ಬಳಿಕ ನಗರಸಭೆ ಆಯುಕ್ತ ಎಚ್.ಟಿ.ಕೃಷ್ಣಮೂರ್ತಿ ಅವರಿಗೆ ಕನ್ನಡ ಕಡ್ಡಾಯಗೊಳಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕನ್ನಡ ನಾಮಫಲಕಗಳು ಇರಬೇಕೆಂಬ ಹಕ್ಕೋತ್ತಾಯ ಮುಂದಿಟ್ಟುಕೊಂಡು ಚಳವಳಿ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಕನ್ನಡ ನಮಗೇಕೆ ಬೇಕು ಎಂಬ ದರ್ಪದಿಂದ ಕೊಬ್ಬಿರುವ ಪರಭಾಷಿಕ ಉದ್ಯಮಿಗಳಿಗೆ ತಕ್ಕಪಾಠ ಕಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಈಗಾಗಲೇ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೆತೇರ ನಾಮಫಲಕಗಳು ಧರೆಗುರುಳಿವೆ. ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿರುವುದಕ್ಕೆ ಕರವೇ ಹೋರಾಟವೇ ಕಾರಣ. ಕರ್ನಾಟಕದಲ್ಲಿ ಕನ್ನಡ ಸೊರಗಬಾರದೆಂಬ ದೃಷ್ಟಿಯಿಂದ ಕನ್ನಡದಲ್ಲಿ ನಾಮಫಲಕ ಇರಬೇಕು ಎಂಬ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಹೇಳಿದರು.
ಕನ್ನಡಿಗರು ಎಂದಿಗೂ ಯಾವ ಭಾಷೆ ವಿರೋಧಿಗಳಲ್ಲ. ಆದರೆ ಪದೇ ಪದೆ ಕನ್ನಡಕ್ಕೆ ಅಪಮಾನ ಆಗುವುದನ್ನು ಸಹಿಸುವುದಿಲ್ಲ. ಹೀಗಾಗಿ ಕನ್ನಡ ನಾಮಫಲಕ ಹಾಕದವರು ಕನ್ನಡದ್ರೋಹಿಗಳು. ಅವರಿಗೆ ಜಿಲ್ಲೆಯಲ್ಲಿ ಎಚ್ಚರಿಕೆ ನಿಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿ ಕರವೇ ಮುಖಂಡರು ನಗರದಲ್ಲಿ ಸುಮಾರು 6 ಕಿ.ಮೀ. ಪಾದಯಾತ್ರೆ ಕೈಗೊಂಡು ಅಂಗಡಿ ಮಾಲೀಕರಿಗೆ ಮಾ.13ರ ತನಕ ಗಡುವು ನೀಡಿ ಎಚ್ಚರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಅಧಿಕಾರಿಗಳಿಂದ ಅಂಗಡಿ ಮುಂಗಟ್ಟುದಾರರಿಗೆ ನೋಟೀಸ್ ಜಾರಿಗೊಳಿಸುವ ಮೂಲಕ ರಾಜ್ಯಸರ್ಕಾರದ ನಿರ್ಣಯವನ್ನು ಯಥಾವತ್ತಾಗಿ ಪಾಲನೆ ಮಾಡಲಾಗುವುದು ಎಂದು ಹೇಳಿದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಮಲ್ಲೇಶ್, ತಾಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಶಶಿ, ಪಂಚಾಕ್ಷರಿ, ಯುವಘಟಕದ ಅಧ್ಯಕ್ಷ ಕುಮಾರ್‌ಶೆಟ್ಟಿ, ವಕ್ತಾರ ಕೋಟೆ ಸೋಮಣ್ಣ, ಕಡೂರು ಅಧ್ಯಕ್ಷ ಸಿದ್ದಪ್ಪ, ಅಜ್ಜಂಪುರ ಅಧ್ಯಕ್ಷ ಮಧು, ಮೂಡಿಗೆರೆ ಅಧ್ಯಕ್ಷ ಪ್ರಸನ್ನ ಗೌಡ, ಮುಖಂಡರಾದ ನಾಗಲತಾ, ಪೂರ್ಣಿಮಾ, ಮಂಜುಳಾಬಾಯಿ, ಶೈಲಶ್ರೀ, ಶ್ರೀಧರ್ ಮತ್ತಿತರರಿದ್ದರು.