

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಬ್ರಿಟಿಷರ ದಾಸ್ಯದಿಂದ ದೇಶವನ್ನು ರಕ್ಷಿಸಿದ ಕೀರ್ತಿ ಜತೆಗೆ ಮದ್ಯಪಾನಮುಕ್ತ ಮಾಡಲು ಕೂಡ ಆಂದೋಲನ ಮಾಡಿದ ಕೀರ್ತಿ ಮಹಾತ್ಮಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಉಮರಬ್ಬ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ 155ನೇ ಗಾಂಧಿ ಸ್ಮತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹಲವು ಸಮಾಜಮುಖಿ ಚಿಂತನೆ ಹೊತ್ತು ಯೋಜನೆ ಕೆಲಸ ಮಾಡುತ್ತಿದ್ದು, ಆರೋಗ್ಯ, ಶಿಕ್ಷಣ, ಕೃಷಿ, ಮಹಿಳಾ ಸಬಲೀಕರಣ ದೃಷ್ಟಿಯಿಂದ ಹಲವು ರೀತಿಯಲ್ಲಿ ಶ್ರಮಿಸಲಾಗುತ್ತಿದೆ. ಪ್ರಮುಖವಾಗಿ ಗಾಂಧಿ ಕಂಡ ರಾಮರಾಜ್ಯದ ಪರಿಕಲ್ಪನೆ ಸಾಕಾರ ಗೊಳಿಸುವ ದೃಷ್ಟಿಯಿಂದ ಮದ್ಯ ವರ್ಜನ ಶಿಬಿರ ಆಯೋಜಿಸಿ, ಸಹಸ್ರಾರು ಕುಟುಂಬಗಳಿಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ 5 ಮದ್ಯವರ್ಜನ ಶಿಬಿರಗಳ ಮೂಲಕ 250 ಜನ ಪರಿವರ್ತನೆಯಾಗಿ, ಮದ್ಯ ಸೇವನೆಮುಕ್ತರಾಗಿ ನೆಮ್ಮದಿ ಜೀವನ ಮಾಡುವಂತೆ ಮಾಡಿದ್ದಾರೆ ಎಂದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸದಸ್ಯ ವೆಂಕಟೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಶಕಗಳಿಂದ ಹಳ್ಳಿ, ನಗರ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಶಾಖೆಗಳನ್ನು ಪ್ರಾರಂಭಿಸಿ, ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸಮಾಜದ ಉನ್ನತಿಗೆ ಶ್ರಮಿಸುತ್ತಿದೆ. ಇಂತಹ ಸಂಸ್ಥೆಯ ಜತೆಗೆ ಕೈ ಜೋಡಿಸಿ, ನಮ್ಮ ಅಳಿಲು ಸೇವೆ ಸಲ್ಲಿಸಿದರೆ, ನಮ್ಮ ಬದುಕು ಕೂಡ ಸಾರ್ಥಕತೆ ಕಾಣುತ್ತದೆ ಎಂದರು.