

ರಟ್ಟಿಹಳ್ಳಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತ, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಸಲ್ಲಿಸಿದ ಹನುಮಂತಗೌಡ ಭರಮಣ್ಣನವರಿಗೆ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿರುವುದು ಅವರ ಪ್ರಮಾಣಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಹಾಗೂ ಹಾಲು ಉತ್ಪಾದಕರ ಸಹಯೋಗದೊಂದಿಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹನುಮಂತಗೌಡ ಭರಮಣ್ಣನವರ ಅವರಿಗೆ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಮತ್ತು ಅವರ 66ನೇ ಜನ್ಮದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವಜ್ಞನ ನಾಡು ಶೈಕ್ಷಣಿಕ, ಆರ್ಥಿಕ, ರಾಜಕೀಯ, ಧಾರ್ವಿುಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಜ್ಞಾವಂತಿಕೆಯಿಂದ ಕೂಡಿದೆ. ಜಿ.ಬಿ. ಶಂಕರರಾವ್, ಬಿ.ಜಿ. ಬಣಕಾರ, ಬಿ.ಎಚ್. ಬನ್ನಿಕೋಡ, ಡಿ.ಎಂ. ಸಾಲಿ, ಎಸ್.ಎಸ್. ಪಾಟೀಲ, ಬಿ.ಸಿ. ಪಾಟೀಲ ಹೀಗೆ ಹಲವರು ಸಹಕಾರ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ತಾಲೂಕಿಗೆ ಇಲ್ಲಿಯವರೆಗೆ 5 ಸಹಕಾರ ರತ್ನ ಪ್ರಶಸ್ತಿಗಳು ಲಭಿಸಿವೆ ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಯಾವುದೇ ವ್ಯಕ್ತಿ ಕಾಯಕದ ನಿಷ್ಠೆಯನ್ನು ಪ್ರಾಮಾಣಿಕವಾಗಿ ತೋರಿದಾಗ ಪ್ರಶಸ್ತಿಗಳು ಲಭಿಸುತ್ತವೆ. ಹನುಮಂತಗೌಡ ಅವರು ಸದಾ ಕಾಯಕ ನಿಷ್ಠೆಯೊಂದಿಗೆ ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದರು.
ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂಕಪ್ಪ ಶಿವಯೋಗಿ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ನಿಸ್ವಾರ್ಥ ಸೇವೆ ಮತ್ತು ಬದುಕಿನ ಉತ್ತಮ ವಿಧಾನಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಹಾವೇರಿ ಹಾಲು ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಹನುಮಂತಗೌಡ ಭರಮಣ್ಣನವರ ಮಾತನಾಡಿ, ಜಿಲ್ಲೆಯ ಸಮಸ್ತ ಜನತೆಯ ಆಶೀರ್ವಾದದಿಂದ ಸಹಕಾರ ಸಂಘಗಳ ಅಪೇಕ್ಷೆಯಂತೆ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯು ಹಾವೇರಿ ಹಾಲು ಒಕ್ಕೂಟಕ್ಕೆ ಕಿರೀಟವಾಗಿದೆ ಎಂದರು.
ಸಾಹಿತಿ ಡಾ.ನಿಂಗಪ್ಪ ಚಳಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ನಾಮ ನಿರ್ದೇಶಿತ ನಿರ್ದೇಶಕ ಚಂದ್ರಪ್ಪ ಜಾಲಗಾರ, ಜಿ.ಪಂ. ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಪಿ.ಡಿ. ಬಸನಗೌಡ್ರ, ಮಹೇಶ ಗುಬ್ಬಿ, ವಸಂತ ದ್ಯಾವಕ್ಕಳವರ, ವಿನಯ ಪಾಟೀಲ, ಅಶೋಕ ಹೆಡಿಯಾಲ, ಕೆ.ವೈ. ಬಾಜೀರಾಯರ, ಶಂಕರ ಹಾದ್ರಿಹಳ್ಳಿ, ರವೀಂದ್ರ ಮುದಿಯಪ್ಪನವರ, ಗೋಪಾಲ ಮಡಿವಾಳರ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಸಿ.ಎಚ್. ಚಕ್ರಸಾಲಿ, ದತ್ತಣ್ಣ ರಾಯ್ಕರ ಕಾರ್ಯಕ್ರಮ ನಿರ್ವಹಿಸಿದರು.