ಸಿಎಗಳು ದೇಶದ ಆರ್ಥಿಕ ವಲಯದ ರಕ್ಷಕರು...

SUMA Lead
Published on

ಮಿಥುನ್​ ಎಚ್​.ಎನ್​. ಅಭಿಪ್ರಾಯ

ಸಾಧಕಿ ಶಮಾ ಕುಂದರ್​ಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಚಾರ್ಟರ್ಡ್​ ಅಕೌಂಟೆಂಟ್​ (ಸಿಎ) ಪರೀಕ್ಷೆ ಉತ್ತೀರ್ಣವಾಗುವುದು ಸುಲಭದ ಮಾತಲ್ಲ. ಕಠಿಣ ಪರಿಶ್ರಮ ಮತ್ತು ನಿರಂತರ ಓದಿನಿಂದ ಮಾತ್ರ ಸಾಧ್ಯ ಎಂಬ ಅರಿವು ನನ್ನ ಓದಿನ ಸಂದರ್ಭದಲ್ಲಿ ಅರಿವಾಗಿದೆ. ಸಿಎಗಳು ನಮ್ಮ ದೇಶದ ಆರ್ಥಿಕ ವಲಯದ ರಕ್ಷಕರು ಎಂದು ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ವರಿಷ್ಠ ಮಿಥುನ್​ ಎಚ್​.ಎನ್​. ಅಭಿಪ್ರಾಯಪಟ್ಟರು.

ಉಡುಪಿಯ ನಾಯಕ್​ ಆ್ಯಂಡ್​ ಅಸೊಸಿಯೇಟ್​ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ಯತ್ನದಲ್ಲೇ ಸಿಎ ಪರೀಕ್ಷೆ ಉತ್ತೀರ್ಣಗೊಂಡು ಸಾಧನೆ ಮಾಡಿದ ಸಿಎ. ಶಮಾ ಕುಂದರ್​ ಅವರನ್ನು ಸನ್ಮಾನಿಸಿ ಮಾತನಾಡಿದರು.

ಗಮನಾರ್ಹ ಸಾಧನೆ

ಉಡುಪಿಯ ವಾಣಿಜ್ಯ ತೆರಿಗೆಯ ಉಪ ಆಯುಕ್ತ (ಜಾರಿ) ಹೊಳೆಯಪ್ಪ ಎಚ್​. ಮಾತನಾಡಿ, ಮನೆಯಲ್ಲಿ ಶ್ರೀಮಂತಿಕೆ, ಎಲ್ಲ ಬಗೆಯ ಸೌಕರ್ಯ ಅನುಕೂಲ ಇದ್ದು ಸಾಧನೆ ಮಾಡಿದರೆ ಅದಕ್ಕೆ ಹೆಚ್ಚಿನ ಮಹತ್ವ ಇರುವುದಿಲ್ಲ. ಆದರೆ, ಯಾವುದೇ ಕನಿಷ್ಠ ಅನುಕೂಲ ಇಲ್ಲದೆ, ಇನ್ನೊಬ್ಬರ ಸಹಕಾರ ಅಥವಾ ಟ್ಯೂಷನ್​ ಪಡೆಯದೆ ಸಾಧಿಸಿದಾಗ ಮಹತ್ವ ಬರುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರಥಮ ಯತ್ನದಲ್ಲೇ ಅತ್ಯಂತ ಕಠಿಣ ವಿಷಯಗಳನ್ನೊಳಗೊಂಡ ಸಿಎ ಪರೀಕ್ಷೆ ಪಾಸ್​ ಆಗಿರುವ ಶಮಾ ಅವರು ಅಭಿನಂದನೆಗೆ ಅರ್ಹರು ಎಂದರು.

ಶಮಾ ಕುಂದರ್​ ತಂದೆ ರಮೇಶ್​ ಕುಂದರ್​, ತಾಯಿ ಮಲ್ಲಿಕಾ ಕುಂದರ್​ ಅವರನ್ನೂ ಗೌರವಿಸಲಾಯಿತು. ಸಮೀಕ್ಷಾ ಕುಂದರ್​, ಕಚೇರಿಯ ಸಿಬ್ಬಂದಿ ಪ್ರಶಾಂತ್​ ಉಪಸ್ಥಿತರಿದ್ದರು. ಸಂಸ್ಥೆಯ ಸುಮಾ ಹಾಗೂ ಸುಹಾಸಿನಿ ಕಾರ್ಯಕ್ರಮ ನಿರ್ವಹಿಸಿದರು.

ಸಾಧಕರಿಂದ ಸಾಧಕರ ಸನ್ಮಾನ

Suma Phot0 2
ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ಸಿಎ. ನರಸಿಂಹ ನಾಯಕ್​ ಮಾತನಾಡಿ, ಸಾಧಕರಿಂದ ಸಾಧಕರ ಸನ್ಮಾನ ಮಾಡಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಮಕ್ಕಳಿಗಾಗಿ ತುಂಬ ತ್ಯಾಗ ಮಾಡುವ ಪಾಲಕರನ್ನು ಅಭಿನಂದಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರೇರಣಾತ್ಮಕವಾದ ಇಂತಹ ಕಾರ್ಯಕ್ರಮದಿಂದ ನಮ್ಮ ಸಂಸ್ಥೆಯ ಫಲಿತಾಂಶವೂ ಶೇ.80 ದಾಟಿದೆ. ನಿಶ್ಚಿತ ಗುರಿ ಇದ್ದರೆ ಮಾತ್ರ ಸಿಎ ಮಾಡಬೇಕು. ಇಲ್ಲದಿದ್ದಲ್ಲಿ ಶಿಕ್ಷಣದ ಮೂರ್ನಾಲ್ಕು ವರ್ಷ ವ್ಯರ್ಥವಾಗುತ್ತದೆ. ಯಾವ ಸಂಪತ್ತು ಗಳಿಸಿದರೂ ಅದನ್ನು ಕಳ್ಳರು ದೋಚಬಹುದು. ಆದರೆ, ವಿದ್ಯೆ ಅಥವಾ ಜ್ಞಾನವೆಂಬ ಸಂಪತ್ತು ಗಳಿಸಿದರೆ ಯಾರಿಂದಲೂ ಕಳವು ಮಾಡಲಾಗದು ಎಂದರು.

ಪ್ರಥಮ ಪ್ರಯತ್ನದಲ್ಲೇ ಸಿಎ ಉತ್ತೀರ್ಣವಾಗಿದ್ದಕ್ಕೆ ಸಂತಸವಾಗಿದೆ. ಸಹಕರಿಸಿದ ನನ್ನ ಪಾಲಕರು, ಮಾರ್ಗದರ್ಶನ ನೀಡಿದ ಸಿಎ. ನರಸಿಂಹ ನಾಯಕ್​ ಹಾಗೂ ಎಲ್ಲರಿಗೆ ಆಭಾರಿಯಾಗಿದ್ದೇನೆ. ಆರ್ಥಿಕ ಕ್ಷೇತ್ರದ ಆಸಕ್ತಿಯಿಂದ ಸಿಎ ಮಾಡಿದ್ದೇನೆ. ಇಲ್ಲಿಗೆ ಬಂದ ಬಳಿಕ ದೇಶ ಸೇವೆ ಮಾಡಬೇಕೆಂಬ ಕನಸು ಹೊಂದಿದ್ದು, ಐಎಎಸ್​ ಮಾಡಲು ನಿರ್ಧರಿಸಿದ್ದೇನೆ. ಈಗಾಗಲೇ ಪ್ರತಿಷ್ಠಿತ 17 ಕಂಪನಿಗಳಿಂದ ಉದ್ಯೋಗವಕಾಶ ಬಂದಿದೆ. | ಸಿಎ. ಶಮಾ ಕುಂದರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net